ಸ್ಪೇಸ್ಎಕ್ಸ್ IPOಗೆ ಸಿದ್ಧತೆ ನಡೆಸುತ್ತಿದ್ದಂತೆ 600 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ತಲುಪಿದ ಎಲಾನ್ ಮಸ್ಕ್

ಎಲಾನ್ ಮಸ್ಕ್ (File Photo: PTI)
ಸ್ಪೇಸ್ ಎಕ್ಸ್ ನ ಮೌಲ್ಯಮಾಪನದ ನಂತರ ಎಲಾನ್ ಮಸ್ಕ್ ರ ಆಸ್ತಿಯ ಮೌಲ್ಯ 168 ಶತಕೋಟಿ ಡಾಲರ್ ಏರಲಿದ್ದು, ಒಟ್ಟು ನಿವ್ವಳ ಆಸ್ತಿ ಮೌಲ್ಯವು 677 ಶತಕೋಟಿ ಡಾಲರ್ ಗಳಿಗೆ ಏರಲಿದೆ.
ಜಾಗತಿಕವಾಗಿ 600 ಶತಕೋಟಿ ಡಾಲರ್ ಗಳಷ್ಟು ನಿವ್ವಳ ಆಸ್ತಿ ಮೌಲ್ಯವನ್ನು ದಾಖಲಿಸಿದ ಮೊತ್ತ ಮೊದಲ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ ಎಲಾನ್ ಮಸ್ಕ್. ಎಲಾನ್ ಮಸ್ಕ್ ಒಡೆತನದ ಖಾಸಗಿ ರಾಕೆಟ್ ಮತ್ತು ಉಪಗ್ರಹ ತಯಾರಿಕಾ ಕಂಪನಿ ಸ್ಪೇಸ್ ಎಕ್ಸ್ ಸ್ಟಾರ್ಟಪ್ ರೂ 800 ಶತಕೋಟಿ ಡಾಲರ್ ಮೌಲ್ಯಮಾಪನದಲ್ಲಿ ಸಾರ್ವಜನಿಕ ಮಾರುಕಟ್ಟೆಗೆ ತೆರೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅವರು ನಿವ್ವಳ ಆಸ್ತಿ ಮೌಲ್ಯದಲ್ಲಿ ಏರಿಕೆಯಾಗಿದೆ.
► ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ
ಕಳೆದ ಅಕ್ಟೋಬರ್ ನಲ್ಲಿ 500 ಶತಕೋಟಿ ಡಾಲರ್ ನಿವ್ವಳ ಆಸ್ತಿ ಮೌಲ್ಯವನ್ನು ದಾಟಿದ ಪ್ರಥಮ ವ್ಯಕ್ತಿ ಎನ್ನುವ ದಾಖಲೆಯನ್ನು ಅವರು ಸಾಧಿಸಿದ್ದರು. ಅವರು ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಶೇ 42ರಷ್ಟು ಷೇರುಗಳ ಪಾಲನ್ನು ಹೊಂದಿದ್ದಾರೆ. ಸ್ಪೇಸ್ ಎಕ್ಸ್ ಮುಂದಿನ ವರ್ಷ ಸಾರ್ವಜನಿಕ ಐಪಿಒಗೆ ತೆರೆದುಕೊಳ್ಳಲಿದೆ.
► ನಿವ್ವಳ ಆಸ್ತಿ ಮೌಲ್ಯ ಏರಿಕೆ
ಎಲಾನ್ ಮಸ್ಕ್ ಒಡೆತನದ ಖಾಸಗಿ ರಾಕೆಟ್ ಮತ್ತು ಉಪಗ್ರಹ ತಯಾರಿಕಾ ಕಂಪನಿ ಸ್ಪೇಸ್ ಎಕ್ಸ್ ಸ್ಟಾರ್ಟಪ್ ರೂ. 800 ಶತಕೋಟಿ ಡಾಲರ್ ಮೌಲ್ಯಮಾಪನದಲ್ಲಿ ಸಾರ್ವಜನಿಕ ಮಾರುಕಟ್ಟೆಗೆ ತೆರೆದುಕೊಳ್ಳಲಿದೆ. ಸ್ಪೇಸ್ ಎಕ್ಸ್ ನ ಮೌಲ್ಯಮಾಪನದ ನಂತರ ಎಲಾನ್ ಮಸ್ಕ್ ರ ಆಸ್ತಿಯ ಮೌಲ್ಯ 168 ಶತಕೋಟಿ ಡಾಲರ್ ಏರಲಿದ್ದು, ಒಟ್ಟು ನಿವ್ವಳ ಆಸ್ತಿ ಮೌಲ್ಯವು 677 ಶತಕೋಟಿ ಡಾಲರ್ ಗಳಿಗೆ ಏರಲಿದೆ.
ಏನಿದು ಐಪಿಒ ವ್ಯವಹಾರ?:
ಷೇರು ಮಾರುಕಟ್ಟೆಗಳಲ್ಲಿ ಐಪಿಒಗಳಿಗೆ ಭಾರಿ ಬೇಡಿಕೆಯಿದೆ. ಯಾವುದೇ ಕಂಪನಿಯು ಮೊದಲ ಬಾರಿಗೆ ಷೇರುಗಳ ಮಾರಾಟದ ಮೂಲಕ ಸಾರ್ವಜನಿಕವಾಗಿ ತೆರೆದುಕೊಳ್ಳುವುದನ್ನು ಐಪಿಒ ಎಂದು ಕರೆಯಲಾಗುತ್ತದೆ. ಷೇರುಗಳ ಮಾರಾಟದಿಂದ ಬರುವ ಹಣದಿಂದ ತಮ್ಮ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಮತ್ತು ಸಾಲಗಳನ್ನು ತೀರಿಸಲು ಬಳಸಲಾಗುತ್ತದೆ. ಇದೀಗ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿ ಮುಂದಿನ ವರ್ಷದ ಆರಂಭದಲ್ಲಿ ಐಪಿಒಗೆ ಬರಲು ಸಿದ್ಧತೆ ನಡೆಸುತ್ತಿದೆ.
ಪ್ರಸ್ತುತ ಕಂಪನಿ ಐಪಿಒ ಸಿದ್ಧತೆಗಾಗಿ ಇನ್ಸೈಡರ್ ಶೇರ್ ಸೇಲ್ (ಆಂತರಿಕ ಪಾಲು) ಪ್ರಕ್ರಿಯೆ ಕೈಗೊಂಡಿದೆ. ಇದರ ಮೂಲಕ ಕಂಪನಿಯ ಮೌಲ್ಯವನ್ನು ಬರೋಬ್ಬರಿ 800 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಸ್ಪೇಸ್ಎಕ್ಸ್ ಪ್ರಸ್ತುತ ಅರ್ಹ ಷೇರುದಾರರಿಂದ ಒಟ್ಟು 2.56 ಶತಕೋಟಿ ಡಾಲರ್ ಮೌಲ್ಯದ ಷೇರು ಖರೀದಿ ಪ್ರಕ್ರಿಯೆ ಪ್ರಾರಂಭಿಸಿದೆ. ಅಲ್ಲಿ ಪ್ರತಿ ಷೇರಿಗೆ 421 ಡಾಲರ್ ಪಾವತಿಸಲು ಆಫರ್ ನೀಡಿದೆ.
ಐಪಿಒ ಮೂಲಕ ಸಂಗ್ರಹಿಸುವ ನಿಧಿಯನ್ನು ಸ್ಟಾರ್ಶಿಪ್ ರಾಕೆಟ್ ಅಭಿವೃದ್ಧಿ, ಎಐ ಡೇಟಾ ಸೆಂಟರ್ ಗಳಂತಹ ಉದ್ದೇಶಗಳಿಗೆ ಬಳಸುವುದಾಗಿ ಎಲಾನ್ ಮಸ್ಕ್ ತಿಳಿಸಿದ್ದಾರೆ. ಉದ್ದೇಶಿತ ಐಪಿಒ ಮೂಲಕ ಕಂಪನಿ 25 ಶತಕೋಟಿ ಡಾಲರ್ ಗಳಿಗಿಂತ ಹೆಚ್ಚು ನಿಧಿ ಸಂಗ್ರಹಿಸುವ ಗುರಿ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಐಪಿಒಗಳಲ್ಲಿ ಒಂದಾಗಲಿದೆ ಎಂದು ಊಹಿಸಲಾಗಿದೆ
ಟೆಸ್ಲಾದಲ್ಲಿ ಅತಿ ಹೆಚ್ಚು ವೇತನ
ಮಸ್ಕ್ ಅವರು ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ಟೆಸ್ಲಾದಲ್ಲಿ ಶೇ 12ರಷ್ಟು ಷೇರುಗಳನ್ನು ಹೊಂದಿದ್ದಾರೆ. ಆ ಕಂಪನಿಯ ಷೇರು ಮೌಲ್ಯ ಈ ವರ್ಷ ಶೇ 13ರಷ್ಟು ಜಿಗಿದಿದೆ. ಈ ಕಂಪನಿಯು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಸುರಕ್ಷತಾ ಮಾನಿಟರ್ಗಳಿಲ್ಲದೆ ರೋಬೋಟ್ಯಾಕ್ಸಿಸ್ ಅನ್ನು ಪರೀಕ್ಷಿಸುತ್ತಿರುವ ಸುದ್ದಿ ಹರಡುತ್ತಿದ್ದಂತೆ ಸೋಮವಾರ ಕಂಪನಿಯ ಷೇರು ಶೇ 4ರಷ್ಟು ಏರಿಕೆಯಾಗಿದೆ.
ನವೆಂಬರ್ ನಲ್ಲಿ ಟೆಸ್ಲಾದ ಷೇರು ಮಾಲಕರು ಮಸ್ಕ್ ಅವರಿಗೆ ಒಂದು ಲಕ್ಷ ಕೋಟಿ ವೇತನ ನೀಡಲು ಒಪ್ಪಿಗೆ ನೀಡಿದ್ದರು. ಜಾಗತಿಕ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಕಾರ್ಪೋರೇಟ್ ವೇತನವಾಗಿದೆ. ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯನ್ನು ಎಐ ಮತ್ತು ರೊಬೊಟಿಕ್ಸ್ ಕಡೆಗೆ ಕೊಂಡೊಯ್ಯುವ ಕುರಿತಂತೆ ಅವರ ಯೋಜನೆಗೆ ಹೂಡಿಕೆದಾರರು ಒಪ್ಪಿಗೆ ನೀಡಿದ ನಂತರ ಈ ವೇತನ ಏರಿಕೆ ನಡೆದಿತ್ತು.
ಸ್ಟಾರ್ಟಪ್ ಎಕ್ಸ್ಎಐನಲ್ಲೂ ಶೇ 53ರಷ್ಟು ಷೇರು:
ಅವರ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸ್ಟಾರ್ಟಪ್ ಎಕ್ಸ್ಎಐ 230 ಶತಕೋಟಿ ಡಾಲರ್ ಮೌಲ್ಯಮಾಪನದಲ್ಲಿ 15 ಶತಕೋಟಿ ಡಾಲರ್ ಹೊಸ ಷೇರುಗಳ ಏರಿಕೆಯ ಮಾತುಕತೆ ನಡೆಸುತ್ತಿದೆ. ಅವರು ತಮ್ಮ ಎಕ್ಸ್ಎಐ ಅನ್ನು ಎಕ್ಸ್ (ಈ ಹಿಂದೆ ಟ್ವಿಟರ್) ಜೊತೆಗೆ ವಿಲೀನಗೊಳಿಸಿದ್ದಾರೆ. ಫೋರ್ಬ್ಸ್ ಪ್ರಕಾರ ಎಲಾನ್ ಮಸ್ಕ್ ಅವರು 60 ಶತಕೋಟಿ ಡಾಲರ್ ಮೌಲ್ಯದ ಶೇ 53ರಷ್ಟು ಷೇರನ್ನು ಎಕ್ಸ್ಎಐನಲ್ಲಿ ಹೊಂದಿದ್ದಾರೆ. ಆ ಕಂಪನಿಯ ಒಟ್ಟು ನಿವ್ವಳ ಆಸ್ತಿ ಮೌಲ್ಯ 230 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಮಾರ್ಚ್ ನಲ್ಲಿ ಇದರ ಮೌಲ್ಯ 113 ಶತಕೋಟಿ ಡಾಲರ್ ಆಗಿತ್ತು. ಇದೀಗ ಮೌಲ್ಯ ದುಪ್ಪಟ್ಟು ಆಗಿದೆ.







