ರಾಜಕೀಯ ವೆಚ್ಚವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ಎಲಾನ್ ಮಸ್ಕ್

ಎಲಾನ್ ಮಸ್ಕ್ (PTI)
ವಾಷಿಂಗ್ಟನ್ : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಡೊನಾಲ್ಡ್ ಟ್ರಂಪ್ ಅವರ ಹಣಕಾಸು ಬೆಂಬಲಿಗ ಎಲಾನ್ ಮಸ್ಕ್ ಮಂಗಳವಾರ ರಾಜಕೀಯ ವೆಚ್ಚವನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ.
ದೋಹಾದ ಬ್ಲೂಮ್ಬರ್ಗ್ ಆರ್ಥಿಕ ವೇದಿಕೆಯ ವೀಡಿಯೊ ಸಮ್ಮೇಳನದಲ್ಲಿ ಮಾತನಾಡಿದ ಎಲಾನ್ ಮಸ್ಕ್, ರಾಜಕೀಯ ಖರ್ಚಿನ ವಿಷಯದಲ್ಲಿ ನಾನು ಭವಿಷ್ಯದಲ್ಲಿ ಬಹಳಷ್ಟು ಕಡಿಮೆ ಮಾಡಲಿದ್ದೇನೆ. ನಾನು ಈಗಾಗಲೇ ಸಾಕಷ್ಟು ಮಾಡಿದ್ದೇನೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಮಸ್ಕ್ ಅವರ ರಾಜಕೀಯ ಸಹಭಾಗಿತ್ವದ ಬಗ್ಗೆ ಹೂಡಿಕೆದಾರರ ಪರಿಶೀಲನೆ, ಟೆಸ್ಲಾ ಮಾರಾಟ ಮತ್ತು ಷೇರು ಮೌಲ್ಯ ಕುಸಿತದ ಬಗ್ಗೆ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಎಲಾನ್ ಮಸ್ಕ್ ಹೇಳಿಕೆ ಮಹತ್ವದ್ದಾಗಿದೆ. ಮುಂದಿನ ಐದು ವರ್ಷಗಳ ಕಾಲ ಟೆಸ್ಲಾ ಸಿಇಒ ಆಗಿ ಮುಂದುವರಿಯಲು ನಾನು ಬದ್ಧನಾಗಿದ್ದೇನೆ ಎಂದು ಮಸ್ಕ್ ಹೇಳಿದರು.
2024ರಲ್ಲಿ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರ ಮತ್ತು ರಿಪಬ್ಲಿಕನ್ ಪಕ್ಷಕ್ಕೆ ಮಸ್ಕ್ ಕನಿಷ್ಠ 250 ಮಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿದ್ದಾರೆ ಎಂದು ವರದಿಯಾದ ನಂತರ ಈ ಘೋಷಣೆ ಹೊರ ಬಿದ್ದಿದೆ. ಅಮೆರಿಕದ ಕಳೆದ ಚುನಾವಣೆಯಲ್ಲಿ ಎಲಾನ್ ಮಸ್ಕ್ ಟ್ರಂಪ್ ಜೊತೆ ಪ್ರಚಾರದಲ್ಲಿ ಭಾಗವಹಿಸಿದ್ದರು. ಇದಲ್ಲದೆ ರಿಪಬ್ಲಿಕನ್ ಪಕ್ಷದ ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ರ್ಯಾಲಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.





