'ಹಾಸ್ಯಾಸ್ಪದ ದ್ವಿಮುಖ ನಿಲುವು': ಅಂಬಾನಿ ಪರ ಪ್ರಚಾರಕರಿಗೆ ಎಲಾನ್ ಮಸ್ಕ್ ತಿರುಗೇಟು
ಸ್ಟಾರ್ಲಿಂಕ್ ದುಬಾರಿಯಾದರೆ ಯಾರೂ ಖರೀದಿಸಲ್ಲ; ಜಿಯೊದ ಲಾಭ ಕಡಿಮೆಯಾಗಬಹುದು, ವ್ಯವಹಾರ ಮುಚ್ಚುವುದಿಲ್ಲ ಎಂದ ಸ್ಪೇಸ್ ಎಕ್ಸ್ ಮುಖ್ಯಸ್ಥ

ಸ್ಪೇಸ್ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ (Photo: PTI)
ಹೊಸದಿಲ್ಲಿ: ಭಾರತದಲ್ಲಿ ಇಂಟರ್ನೆಟ್ ಸೇವೆಗಳ ಮಾರುಕಟ್ಟೆಗೆ ಸ್ಟಾರ್ಲಿಂಕ್ ಪ್ರವೇಶಿಸುವುದನ್ನು ಕುರಿತ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ, ಸ್ಪೇಸ್ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪರವಾಗಿ ವಾದಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ಇಂಟರ್ನೆಟ್ ಸೇವೆಗಳು ಅಗ್ಗವಾಗಿರುವುದರಿಂದ ಸ್ಟಾರ್ಲಿಂಕ್ಗೆ ಸ್ಪರ್ಧಿಸುವುದು ಕಷ್ಟ ಎನ್ನುವವರ ವಾದವನ್ನು ಪ್ರಶ್ನಿಸಿರುವ ಅವರು, ಅದೇ ವೇಳೆ ಸ್ಟಾರ್ಲಿಂಕ್ ಪ್ರಬಲ ಸ್ಪರ್ಧಿಯಾಗಲಿದೆ ಎನ್ನುವುದನ್ನು ಉಲ್ಲೇಖಿಸಿ, ಇದು 'ಹಾಸ್ಯಾಸ್ಪದ ದ್ವಿಮುಖ ನಿಲುವು' ಎಂದು ಟೀಕಿಸಿದ್ದಾರೆ.
'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ರವಿವಾರ ಪೋಸ್ಟ್ ಮಾಡಿರುವ ಮಸ್ಕ್, ಈಗಿನ ಇಂಟರ್ನೆಟ್ ಮಾರುಕಟ್ಟೆಯನ್ನು ಸಮರ್ಥಿಸಿಕೊಳ್ಳುವವರನ್ನು 'ಅಂಬಾನಿಯ ಇಂಟರ್ನೆಟ್ ಪ್ರಚಾರಕರ ಪಡೆ' ಎಂದು ಕರೆದಿದ್ದಾರೆ.
'ಅಂಬಾನಿಯ ಇಂಟರ್ನೆಟ್ ಪ್ರಚಾರಕರ ಪಡೆಯ ಹಾಸ್ಯಾಸ್ಪದ ವಾದಗಳಿಗೆ ಯಾವುದೇ ಅರ್ಥವಿಲ್ಲ. ಒಂದು ಕಡೆ, ಭಾರತದಲ್ಲಿ ಅಂಬಾನಿಯ ಏಕಸ್ವಾಮ್ಯವು ನೀಡುವ ಅತ್ಯಂತ ಕಡಿಮೆ ದರಗಳೊಂದಿಗೆ ಸ್ಟಾರ್ಲಿಂಕ್ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಆದರೆ, ಅದೇ ಸಮಯದಲ್ಲಿ ಸ್ಟಾರ್ಲಿಂಕ್ ಅತ್ಯಂತ ಪ್ರಬಲ ಸ್ಪರ್ಧಿಯಾಗಲಿದೆ ಎಂದು ಹೇಳುತ್ತಾರೆ. ಇದು ಹಾಸ್ಯಾಸ್ಪದ ದ್ವಿಮುಖ ನಿಲುವು ಮತ್ತು ಉತ್ಪ್ರೇಕ್ಷೆ' ಎಂದು ಮಸ್ಕ್ ಬರೆದಿದ್ದಾರೆ.
'ಜಿಯೋದ ಲಾಭ ಕಡಿಮೆಯಾಗಬಹುದು ಅಷ್ಟೆ'
ಸ್ಟಾರ್ಲಿಂಕ್ ನ ಪ್ರವೇಶದಿಂದ ಭಾರತದ ಗ್ರಾಹಕರಿಗೆ ಇಂಟರ್ನೆಟ್ ಸೇವೆ ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಅವಕಾಶ ಸಿಗಲಿದೆ ಎಂದು ಮಸ್ಕ್ ಹೇಳಿದ್ದಾರೆ. ಹೊಸ ಸ್ಪರ್ಧೆಯಿಂದ ಜಿಯೋದ ಲಾಭ ಕಡಿಮೆಯಾಗಬಹುದೇ ಹೊರತು, ಅದರ ವ್ಯವಹಾರವೇ ಮುಚ್ಚಿಹೋಗುವುದಿಲ್ಲ ಎಂಬುದು ಅವರ ವಾದ.
'ಸ್ಪರ್ಧೆಯು ಭಾರತದ ಸಾಮಾನ್ಯ ನಾಗರಿಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಮೂಲಕ ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ಅಂಬಾನಿಯ ಲಾಭ ಕಡಿಮೆಯಾಗಬಹುದು, ಆದರೆ ಅವರ ವ್ಯವಹಾರವೇನೂ ಮುಚ್ಚಿಹೋಗುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಸ್ಟಾರ್ಲಿಂಕ್ ನ ಸೇವೆಗಳು ದುಬಾರಿಯಾಗಿದ್ದರೆ ಗ್ರಾಹಕರು ಅದನ್ನು ಖರೀದಿಸುವುದಿಲ್ಲ ಎಂದು ಮಸ್ಕ್ ಹೇಳಿದ್ದಾರೆ. ಹೀಗಾಗಿ, ಗ್ರಾಹಕರನ್ನು ಆಕರ್ಷಿಸಲು ಸ್ಪೇಸ್ಎಕ್ಸ್ ತನ್ನ ಸೇವೆಗಳ ದರವನ್ನು ಕೈಗೆಟುಕುವಂತೆ ನಿಗದಿಪಡಿಸಬೇಕಾಗುತ್ತದೆ ಎಂದಿದ್ದಾರೆ.
ಮೊಬೈಲ್ ಡೇಟಾ ಬಳಕೆಯೇ ಇಂಟರ್ನೆಟ್ ಲಭ್ಯತೆಯ ಮಾನದಂಡವಲ್ಲ
ಭಾರತದಲ್ಲಿ ಇಂಟರ್ನೆಟ್ ಸೇವೆಗಳು ವ್ಯಾಪಕವಾಗಿ ಲಭ್ಯವಿದ್ದು, ಅಗ್ಗವಾಗಿವೆ ಎಂಬ ಸಾಮಾನ್ಯ ಗ್ರಹಿಕೆಯನ್ನು ಮ್ಯಾಕ್33 ಫೈನಾನ್ಷಿಯಲ್ ಗ್ರೂಪ್ನ ಸಿಇಒ ಆರನ್ ಬರ್ನೆಟ್ ಪ್ರಶ್ನಿಸಿದ್ದರು. ಅವರ ಪೋಸ್ಟ್ ಗೆ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದಲ್ಲಿ ಸ್ಥಿರ ಬ್ರಾಡ್ಬ್ಯಾಂಡ್ ಸಂಪರ್ಕಗಳ ಬಳಕೆ ಕಡಿಮೆ ಇರುವುದರಿಂದ, ಇಂಟರ್ನೆಟ್ ಸೇವೆಗಳು ಅಗ್ಗವಾಗಿವೆ ಎಂಬ ಗ್ರಹಿಕೆಯು ಮುಖ್ಯವಾಗಿ ಮೊಬೈಲ್ ಇಂಟರ್ನೆಟ್ ಬಳಕೆಯನ್ನು ಆಧರಿಸಿದೆ ಎಂದು ಬರ್ನೆಟ್ ವಾದಿಸಿದ್ದಾರೆ.
ಮನೆಗಳ ಫೈಬರ್ ಬ್ರಾಡ್ಬ್ಯಾಂಡ್ ಸಂಪರ್ಕಗಳಲ್ಲಿ ತಿಂಗಳಿಗೆ ಸುಮಾರು 300 ಜಿಬಿ ಡೇಟಾ ಬಳಕೆಯಾಗುವುದಕ್ಕೆ ಹೋಲಿಸಿದರೆ, ಭಾರತದಲ್ಲಿ ಮಾಸಿಕ ಮೊಬೈಲ್ ಡೇಟಾ ಬಳಕೆ ಸುಮಾರು 30ರಿಂದ 40 ಜಿಬಿ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ. ಕೈಗೆಟುಕುವ ದರದ ಪರ್ಯಾಯ ವ್ಯವಸ್ಥೆ ಲಭ್ಯವಾದರೆ ಸ್ಥಿರ ಬ್ರಾಡ್ಬ್ಯಾಂಡ್ ಸಂಪರ್ಕಗಳ ಬಳಕೆ ಗಣನೀಯವಾಗಿ ಹೆಚ್ಚಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.






