ಟ್ರಿಲಿಯನೇರ್ ಪಟ್ಟದಿಂದ ಕೆಳಗಿಳಿದ ಎಲಾನ್ ಮಸ್ಕ್

ಎಲಾನ್ ಮಸ್ಕ್ | Photo Credit : PTI
ನ್ಯೂಯಾರ್ಕ್,ಜೂ.25: ಶೇರು ಮಾರುಕಟ್ಟೆಯಲ್ಲಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್ ಎಕ್ಸ್’ ಸೇರ್ಪಡೆಗೊಂಡ ಬಳಿಕ ಜಗತ್ತಿನ ಪ್ರಪ್ರಥಮ ಟ್ರಿಲಿನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅದರ ಮಾಲಕ ಎಲಾನ್ ಮಸ್ಕ್ ಅವರಿಗೆ ತನ್ನ ಸಾಧನೆಯನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಬ್ಲೂಮ್ಬರ್ಗ್ ಬಿಲಿಯಾಧೀಶರ ಸೂಚ್ಯಂಕದ ಪ್ರಕಾರ ಎರಡು ವಾರಗಳಿಗೂ ಕಡಿಮೆ ಅವಧಿಯಲ್ಲಿ ಮಸ್ಕ್ ಅವರು ಮತ್ತೆ ಟ್ರಿಲಿಯನೇರ್ ಪಟ್ಟದಿಂದ ಹೊರಬಿದ್ದಿದ್ದಾರೆ.
ಜೂನ್ 12ರಂದು ಅಮೆರಿಕದ ಶೇರು ವಿನಿಮಯ ಕೇಂದ್ರವಾದ ನಾಸ್ಡಾಕ್, ಸ್ಪೇಸ್ ಎಕ್ಸ್ ಅನ್ನು ಶೇರುಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡಿತ್ತು. ಜೂನ್ 16ರ ವೇಳೆಗೆ ಮಸ್ಕ್ ಅವರ ಒಟ್ಟು ಮೌಲ್ಯವು ದಾಖಲೆಯ 1.32 ಟ್ರಿಲಿಯನ್ಗೆ ತಲುಪಿದ್ದು ಶೇರು ಮಾರುಕಟ್ಟೆಯಲ್ಲಿ 1.32 ಟ್ರಿಲಿಯನ್ ಡಾಲರ್ ಏರಿಕೆಯನ್ನು ದಾಖಲಿಸಿದೆ. ಆದಾಗ್ಯೂ, ಮಂಗಳವಾರದ ವೇಳೆಗೆ ಅವರ ಸಂಪತ್ತಿನ ಒಟ್ಟು ಮೌಲ್ಯ 957 ಶತಕೋಟಿ ಡಾಲರ್ಗೆ ಕುಸಿದಿದೆ.
ತಂತ್ರಜ್ಞಾನ ಉದ್ಯಮವಲಯದ ಶೇರುಗಳ ಮೌಲ್ಯದಲ್ಲಿ ಭಾರೀ ಕುಸಿತವುಂಟಾದುದೇ ಮಸ್ಕ್ ಅವರ ಸಂಪತ್ತಿನ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣವಾಗಿದೆ. ಕೃತಕ ಬುದ್ಧಿಮತ್ತೆ (ಎಐ) ವಲಯದ ಮೂಲಸೌಕರ್ಯದಲ್ಲಿ ಹೆಚ್ಚಳ ಹಾಗೂ ಅದರ ಲಾಭದಾಯಕತ್ವದ ಬಗ್ಗೆ ಸಂದೇಹಗಳು ದಟ್ಟವಾಗತೊಡಗಿರುವ ಹಿನ್ನೆಲೆಯಲ್ಲಿ ತಂತ್ರಜ್ಞಾನ ಕ್ಷೇತ್ರದ ಶೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಸ್ಪೇಸ್ಎಕ್ಸ್ನ ಶೇರುಗಳ ಮೌಲ್ಯವು, ಅದರ ಉತ್ತುಂಗಾವಸ್ಥೆಯಲ್ಲಿದ್ದುದಕ್ಕಿಂತ ಶೇ.30ರಷ್ಟು ಕುಸಿದಿದೆ. ಜೂನ್ 22ರಲ್ಲಿ ಮಸ್ಕ್ ಅವರ ಸುಮಾರು 240 ಶತಕೋಟಿ ಡಾಲರ್ ಸಂಪತ್ತು ಕರಗಿದೆ.






