ವಿಶ್ವ ಸಂಸ್ಥೆ | ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಖಾಲಿ ಕುರ್ಚಿಗಳ ಸ್ವಾಗತ! ನೆತನ್ಯಾಹು ಭಾಷಣದ ವೇಳೆ ರಾಜತಾಂತ್ರಿಕರಿಂದ ಸಭಾತ್ಯಾಗ

PC : indiatoday.in
ಹೊಸದಿಲ್ಲಿ: ಶುಕ್ರವಾರ ವಿಶ್ವ ಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಮಾತನಾಡಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಗಮಿಸಿದಾಗ, ಭಾರಿ ಸಂಖ್ಯೆಯ ರಾಜತಾಂತ್ರಿಕರು ಸದನದಿಂದ ನಿರ್ಗಮಿಸಿದ ಘಟನೆ ನಡೆದಿದೆ.
ಗಾಝಾ ಮೇಲಿನ ಸೇನಾ ಕಾರ್ಯಾಚರಣೆಯ ಕಾರಣಕ್ಕೆ ಇಸ್ರೇಲ್ ಜಾಗತಿಕ ಏಕಾಂಗಿತನ ಅನುಭವಿಸುತ್ತಿರುವಾಗಲೇ ಈ ಪ್ರತಿಭಟನಾರ್ಥ ಸಭಾತ್ಯಾಗ ನಡೆದಿದೆ.
ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಯುದ್ಧಾಪರಾಧದ ಆರೋಪವನ್ನು ಎದುರಿಸುತ್ತಿರುವ ನೆತನ್ಯಾಹು, ಗಾಝಾದಲ್ಲಿ ಇಸ್ರೇಲ್ ತನ್ನ ಕೆಲಸ ಮುಗಿಸಲಿದೆ ಹಾಗೂ ಅದನ್ನು ಎಷ್ಟು ಸಾಧ್ಯವೊ ಅಷ್ಟು ಅಷ್ಟು ಶೀಘ್ರವಾಗಿ ಮುಕ್ತಾಯಗೊಳಿಸಲಿದೆ ಎಂದು ಘೋಷಿಸಿದ್ದರು. ನನ್ನ ಹೇಳಿಕೆಯನ್ನು ಫೆಲೆಸ್ತೀನಿಯನ್ನರಿಗೆ ಪ್ರಸಾರ ಮಾಡಲು ಗಾಝಾ ಪಟ್ಟಿಯ ಸುತ್ತಮುತ್ತ ಧ್ವನಿವರ್ಧಕಗಳನ್ನು ಅಳವಡಿಸುವಂತೆ ಇಸ್ರೇಲ್ ಸೇನೆಗೆ ನೆತನ್ಯಾಹು ಸೂಚಿಸಿದ್ದರು.
Axios ಸುದ್ದಿ ತಾಣದ ವರದಿಯ ಪ್ರಕಾರ, ನೆತನ್ಯಾಹು ಭಾಷಣದ ವೇಳೆ ಅರಬ್ ಹಾಗೂ ಮುಸ್ಲಿಂ ರಾಷ್ಟ್ರಗಳ ಬಹುತೇಕ ಎಲ್ಲ ಪ್ರತಿನಿಧಿಗಳು ಹಾಗೂ ಅವರೊಂದಿಗೆ ಹಲವು ಆಫ್ರಿಕಾ ದೇಶಗಳು ಮತ್ತು ಕೆಲವು ಯೂರೋಪ್ ದೇಶಗಳ ಪ್ರತಿನಿಧಿಗಳು ಸಭಾತ್ಯಾಗ ಮಾಡಿದರು ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕೆಲವು ಮಿತ್ರ ರಾಷ್ಟ್ರಗಳನ್ನು ಹೊರತುಪಡಿಸಿ, ಜಾಗತಿಕ ಮಟ್ಟದಲ್ಲಿ ಇಸ್ರೇಲ್ ತೀರಾ ಏಕಾಂಗಿಯಾಗುತ್ತಿರುವ ಹೊತ್ತಿನಲ್ಲೇ ಈ ಸಭಾತ್ಯಾಗ ನಡೆದಿದೆ.





