ಯೆಮೆನ್ ನಲ್ಲಿ ಹಿಂಸಾಚಾರಕ್ಕೆ ಅಂತ್ಯ ಹಾಡಿ: ಪೋಪ್ ಲಿಯೋ ಕರೆ
ತೈಝ್ ನಗರದಲ್ಲಿ ಆಹಾರ, ನೀರು, ವೈದ್ಯಕೀಯ ನೆರವಿನ ಕೊರತೆ; ಮಾನವೀಯ ಬಿಕ್ಕಟ್ಟಿನ ಬಗ್ಗೆ ಕಳವಳ

ಪೋಪ್ ಲಿಯೋ | Photo Credit : PTI
ವ್ಯಾಟಿಕನ್, ಅ. 26: ಯೆಮೆನ್ ನಲ್ಲಿ ಮುಂದುವರಿದಿರುವ ಹಿಂಸಾಚಾರಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವಂತೆ ರೋಮನ್ ಕ್ಯಾಥೋಲಿಕ್ ಚರ್ಚ್ ನ ಮುಖ್ಯಸ್ಥ ಪೋಪ್ ಲಿಯೋ XIV ಮನವಿ ಮಾಡಿದ್ದಾರೆ ಎಂದು Aljazeera ವರದಿ ಮಾಡಿದೆ.
ವ್ಯಾಟಿಕನ್ ನ ಸೇಂಟ್ ಪೀಟರ್ಸ್ ಸ್ಕ್ವೇರ್ ನಲ್ಲಿರುವ ಕಿಟಕಿಯಿಂದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ 71 ವರ್ಷದ ಪೋಪ್, ಯೆಮೆನ್ ನಲ್ಲಿನ ಹಿಂಸಾಚಾರ ಹಾಗೂ ಅಲ್ಲಿನ ಜನರು ಎದುರಿಸುತ್ತಿರುವ ಗಂಭೀರ ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ನೈಋತ್ಯ ಯೆಮೆನ್ ನ ತೈಝ್ ನಗರದಲ್ಲಿ ಜನರು ಆಹಾರ, ನೀರು ಮತ್ತು ವೈದ್ಯಕೀಯ ನೆರವಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದರು.
“ಯೆಮೆನ್ ಮತ್ತು ಇಡೀ ಪ್ರದೇಶದ ಜನರು ಶಾಂತಿಯಿಂದ ಬದುಕುವಂತಾಗಲು ಸಂಘರ್ಷಗಳು ನಿಲ್ಲಬೇಕೆಂದು ನಾನು ಮನಪೂರ್ವಕವಾಗಿ ಮನವಿ ಮಾಡುತ್ತೇನೆ” ಎಂದು ಪೋಪ್ ಹೇಳಿದರು.




