"ಇಂಧನ ದುರಾಸೆ, ಮಾದಕ ದ್ರವ್ಯ ಭಯೋತ್ಪಾದನೆ ಅಲ್ಲ": ಟ್ರಂಪ್ಗೆ ತಿರುಗೇಟು ನೀಡಿದ ವೆನೆಝುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್

PC: indiatoday
ಕರಾಕಾಸ್: ವೆನೆಝುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ನಿಕಟಪೂರ್ವ ಅಧ್ಯಕ್ಷ ನಿಕೋಲಸ್ ಮಡುರೊ ಆಡಳಿತಾವಧಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂಬ ಆರೋಪಗಳು “ಸುಳ್ಳು ಹಾಗೂ ರಾಜಕೀಯ ಪ್ರೇರಿತ”ವೆಂದು ಅವರು ಹೇಳಿದ್ದಾರೆ.
ವೆನೆಝುವೆಲಾದ ಸಂಸತ್ತಿನಲ್ಲಿ ಮಾತನಾಡಿದ ರೊಡ್ರಿಗಸ್, “ವೆನೆಝುವೆಲಾ ಇಂಧನ ಶಕ್ತಿಯ ಪ್ರಮುಖ ಕೇಂದ್ರ. ಇದೇ ಕಾರಣಕ್ಕೆ ನಮ್ಮ ದೇಶ ಅನೇಕ ಸಂಕಷ್ಟಗಳನ್ನು ಎದುರಿಸಿದೆ. ಉತ್ತರದ ದೇಶಗಳ ಇಂಧನ ದುರಾಸೆಯೇ ಈ ಎಲ್ಲದಕ್ಕೂ ಮೂಲ ಕಾರಣ,” ಎಂದು ಹೇಳಿದರು.
ವೆನೆಝುವೆಲಾ ಸರಕಾರದಿಂದ ಸಂಪೂರ್ಣ ಸಹಕಾರ ದೊರಕುತ್ತಿದೆ ಹಾಗೂ ದೇಶದ ತೈಲ ಸಂಪನ್ಮೂಲಗಳ ಮೇಲೆ ದೀರ್ಘಕಾಲ ನಿಯಂತ್ರಣ ಮುಂದುವರಿಯಲಿದೆ ಎಂಬ ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ವೆನೆಝುವೆಲಾ ಅಮೆರಿಕಕ್ಕೆ ಬೇಕಾದ ಎಲ್ಲವನ್ನೂ ನೀಡುತ್ತಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರ” ಎಂದು ಸ್ಪಷ್ಟಪಡಿಸಿದರು.
ಅಮೆರಿಕದೊಂದಿಗೆ ಯಾವುದೇ ಏಕಪಕ್ಷೀಯ ಒಪ್ಪಂದಗಳನ್ನು ತಳ್ಳಿಹಾಕಿದ ರೊಡ್ರಿಗಸ್, “ಎಲ್ಲರಿಗೂ ಲಾಭವಾಗುವ ಇಂಧನ ಸಂಬಂಧಗಳಿಗೆ ನಾವು ಮುಕ್ತರಾಗಿದ್ದೇವೆ. ಆದರೆ ಸಹಕಾರವು ಸ್ಪಷ್ಟವಾಗಿ ನಿರ್ಧರಿಸಲಾದ ವಾಣಿಜ್ಯ ಒಪ್ಪಂದಗಳ ಆಧಾರದಲ್ಲೇ ನಡೆಯಬೇಕು” ಎಂದರು.
ಈ ಹಿಂದೆ ಅಮೆರಿಕದೊಂದಿಗೆ ಸಂಬಂಧಗಳು ಹದಗೆಟ್ಟಿದ್ದರೂ, ವೆನೆಝುವೆಲಾದ ತೈಲ ಮಾರುಕಟ್ಟೆಯನ್ನು ಅಮೆರಿಕಕ್ಕೆ ತೆರೆಯುವ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು. ಮಡುರೊ ಅವರನ್ನು ಅಧಿಕಾರದಿಂದ ದೂರ ಮಾಡಲು ಅಮೆರಿಕ ನಡೆಸಿದ ಪ್ರಯತ್ನಗಳು ದ್ವಿಪಕ್ಷೀಯ ಸಂಬಂಧಗಳ ಮೇಲೆ ಕಪ್ಪು ಚುಕ್ಕೆ ಎಂದು ಹೇಳಿದ ಅವರು, ಅಮೆರಿಕದೊಂದಿಗೆ ವ್ಯಾಪಾರ ಮಾಡುವುದು “ಅಸಾಮಾನ್ಯವೂ ಅಲ್ಲ, ಅನಿಯಮಿತವೂ ಅಲ್ಲ” ಎಂದು ಒತ್ತಿ ಹೇಳಿದರು.







