ಇಂಗ್ಲೆಂಡ್ | ಅಮೆರಿಕದ ವಾಯುನೆಲೆ ಬಳಿ ಶಂಕಿತರ ಬಂಧನ; ಸ್ಥಳೀಯರ ಸ್ಥಳಾಂತರ

ಲಂಡನ್: ಇಂಗ್ಲೆಂಡ್‍ನಲ್ಲಿರುವ ಅಮೆರಿಕದ ವಾಯುಪಡೆ ನೆಲೆಯ ಸಮೀಪವಿರುವ ಮನೆಗಳನ್ನು ಪೊಲೀಸರು ಖಾಲಿ ಮಾಡಿಸಿದ್ದು, ಸ್ಫೋಟಕಗಳಿಗೆ ಸಂಬಂಧಿಸಿದ ಅಪರಾಧದ ಶಂಕೆಯ ಮೇಲೆ ಹಲವು ಜನರನ್ನು ಬಂಧಿಸಿದ್ದಾರೆ.
ಪಶ್ಚಿಮ ಇಂಗ್ಲೆಂಡ್‍ನ ವೆಲ್‍ಫೋರ್ಡ್‍ನಲ್ಲಿರುವ ಹಲವು ಮನೆಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸ್ಥಳವು ಇರಾನ್‍ನ ಕ್ಷಿಪಣಿ ನೆಲೆಗಳ ಮೇಲೆ ದಾಳಿ ಮಾಡಲು ಅಮೆರಿಕನ್ ಪಡೆಗಳು ಬಳಸಿದ್ದ `ಆರ್‌ಎಎಫ್ ಫೇರ್‍ಫೋರ್ಡ್' ನೆಲೆಯ ಹತ್ತಿರದಲ್ಲಿದೆ. ಅಂತಹ ದಾಳಿಗಳಿಗೆ ಬಳಸಲಾಗುವ ಯಾವುದೇ ನೆಲೆಯನ್ನು ಕಾನೂನುಬದ್ಧ ಗುರಿ ಎಂದು ಪರಿಗಣಿಸುವುದಾಗಿ ಇರಾನ್ ಎಚ್ಚರಿಸಿತ್ತು. ಸ್ಫೋಟಕಗಳ ಕಾಯ್ದೆಯಡಿಯಲ್ಲಿ ಹಲವು ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ಸೇನಾ ಬಾಂಬ್ ವಿಲೇವಾರಿ ತಜ್ಞರು ಹಲವು ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ʼನಮ್ಮ ಮಿಲಿಟರಿ ವಿಭಾಗ ಮತ್ತು ಬ್ರಿಟನ್‍ನ ಮಿಲಿಟರಿ ಜಾಗರೂಕರಾಗಿದ್ದು, ನಮ್ಮ ಸೇವಾ ಸಿಬ್ಬಂದಿ, ನಾಗರಿಕರು, ಗುತ್ತಿಗೆದಾರರು ಮತ್ತು ಅವರ ಕುಟುಂಬಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತವೆ' ಎಂದು ಅಮೆರಿಕದ ವಾಯುಪಡೆ ವಕ್ತಾರರು ಹೇಳಿದ್ದಾರೆ.




