ಎಪ್ಸ್ಟೀನ್ ತನಿಖಾ ನಿರ್ವಹಣೆ ವಿವಾದ: ಅಮೆರಿಕ ಅಟಾರ್ನಿ ಜನರಲ್ ವಜಾ

PC: x.com/nabilajamal
ವಾಷಿಂಗ್ಟನ್: ಎಪ್ಸ್ಟೀನ್ ಕಡತ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ.
ಮೃತ ಹವ್ಯಾಸಿ ಪತ್ರಕರ್ತ ಮತ್ತು ಲೈಂಗಿಕ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದ ಜೆಫ್ರಿ ಎಪ್ಸ್ಟೀನ್ ಗೆ ಸಂಬಂಧಿಸಿದ ತನಿಖಾತ್ಮಕ ಕಡತಗಳ ನಿರ್ವಹಣೆಯಲ್ಲಿ ಅಟಾರ್ನಿ ಜನರಲ್ ವಿಫಲರಾಗಿದ್ದಾರೆ ಎಂಬ ಆರೋಪ ಮತ್ತು ಅವರ ಅಭಿಯೋಜಕ ದೃಷ್ಟಿಕೋನದ ಕಾರಣದಿಂದ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ.
ಟ್ರಂಪ್ ಅವರ ನಿಕಟವರ್ತಿಗಳು ಮತ್ತು ಹಲವು ಮಂದಿ ರಿಪಬ್ಲಿಕನ್ ಸಂಸದರು ಬೋಂಡಿ ಕಾರ್ಯನಿರ್ವಹಣೆಯನ್ನು ವ್ಯಾಪಕವಾಗಿ ಟೀಕಿಸಿದ್ದರು. ನ್ಯಾಯಾಂಗ ಇಲಾಖೆಯ ಲೈಂಗಿಕ ಕಳ್ಳಸಾಗಾಣಿಕೆ ತನಿಖೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಅವರು ತಪ್ಪಾಗಿ ನಿರ್ವಹಿಸಿದ್ದರು ಅಥವಾ ತಡೆಹಿಡಿದಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ಟ್ರಂಪ್ ಅವರ ರಾಜಕೀಯ ಟೀಕಾಕಾರರ ವಿರುದ್ಧ ಮತ್ತು ವಿರುದ್ಧದ ಅಪರಾಧ ಪ್ರಕರಣಗಳನ್ನು ವೇಗವಾಗಿ ಮುನ್ನಡೆಸುತ್ತಿಲ್ಲ ಎಂಬ ವಿಚಾರದಲ್ಲೂ ಟ್ರಂಪ್ ಅವರು ಪಾಮ್ ಬೋಂಡಿಯವರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು ಎಂದು ರಾಯ್ಟರ್ಸ್ ವರದಿ ಮಾಡಿದೆ.
ಬೋಂಡಿಯವರ ಪದಚ್ಯುತಿಯನ್ನು ದೃಢಪಡಿಸಿರುವ ಟ್ರಂಪ್, ಉಪ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆಯವರು ಮುಂದೆ ಬೊಂಡಿ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ಜಾಲತಾಣ ಪೋಸ್ಟ್ ನಲ್ಲಿ ಪ್ರಕಟಿಸಿದ್ದಾರೆ. ಆದಾಗ್ಯೂ ಪಾಮ್ ಬೋಂಡಿಯವರನ್ನು "ಶ್ರೇಷ್ಠ ಅಮೆರಿಕನ್ ರಾಷ್ಟ್ರಭಕ್ತೆ ಮತ್ತು ನಿಷ್ಠಾವಂತ ಸ್ನೇಹಿತೆ" ಎಂದು ಶ್ಲಾಘಿಸಿರುವ ಟ್ರಂಪ್, ಖಾಸಗಿ ವಲಯದಲ್ಲಿ ತಮ್ಮ ಉದ್ಯೋಗಕ್ಕೆ ಮರಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.







