ಎಪ್ಸ್ಟೀನ್ ಸಾವು ಆತ್ಮಹತ್ಯೆಯಲ್ಲ, ಕೊಲೆಯಾಗಿರುವ ಸಾಧ್ಯತೆ ಹೆಚ್ಚು: ವಿಧಿವಿಜ್ಞಾನ ತಜ್ಞರ ವಾದ
ಶವಪರೀಕ್ಷೆಯ ದಾಖಲೆ, ಫೋಟೋಗಳ ವಿಶ್ಲೇಷಣೆ; ಮರು ತನಿಖೆಗೆ ಸಹೋದರನ ಆಗ್ರಹ

Photo Credit : AP , PTI
ನ್ಯೂಯಾರ್ಕ್: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನ ಸಾವು ಆತ್ಮಹತ್ಯೆಯಲ್ಲ, ಕೊಲೆಯಾಗಿರುವ ಸಾಧ್ಯತೆಯೇ ಹೆಚ್ಚು ಎಂದು ವಿಧಿವಿಜ್ಞಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶವಪರೀಕ್ಷೆಯ ದಾಖಲೆಗಳು ಮತ್ತು ಫೋಟೋಗಳನ್ನು ಹಲವು ವರ್ಷಗಳ ಕಾಲ ವಿಶ್ಲೇಷಿಸಿದ ಬಳಿಕ ಈ ನಿರ್ಧಾರಕ್ಕೆ ಬಂದಿರುವುದಾಗಿ ಜರ್ನಲ್ ಆಫ್ ಫೋರೆನ್ಸಿಕ್ ಅಂಡ್ ಲೀಗಲ್ ಮೆಡಿಸಿನ್ ನ ಪ್ರಧಾನ ಸಂಪಾದಕ ಮೈಕೆಲ್ ಫ್ರೀಮನ್ ತಿಳಿಸಿದ್ದಾರೆ.
2019ರಲ್ಲಿ ಲೈಂಗಿಕ ಕಳ್ಳಸಾಗಣೆ ಆರೋಪದ ವಿಚಾರಣೆಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಎಪ್ಸ್ಟೀನ್ ನನ್ನು ಹಿಂದಿನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಫ್ರೀಮನ್ CBS News ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
'ವೈದ್ಯಕೀಯ ಪರೀಕ್ಷಕರು ದಾಖಲಿಸಿರುವ ಗಾಯಗಳು ಆತ್ಮಹತ್ಯೆಗಾಗಿ ನೇಣು ಬಿಗಿದುಕೊಂಡಿರುವುದಕ್ಕೆ ಹೊಂದಿಕೆಯಾಗುವುದಿಲ್ಲ. ಎಲ್ಲ ಪುರಾವೆಗಳನ್ನು ಒಟ್ಟಾಗಿ ಪರಿಶೀಲಿಸಿದಾಗ, ಕಿರಿದಾದ ಗಂಟು ಹಾಕಿದ ಬಟ್ಟೆಯನ್ನು ಕುತ್ತಿಗೆಗೆ ಬಿಗಿದು ಹಿಂದಿನಿಂದ ಕತ್ತು ಹಿಸುಕಿ ಕೊಲೆ ಮಾಡಿರುವ ಸಾಧ್ಯತೆಯೇ ಹೆಚ್ಚು' ಎಂದು ಅವರು ಸೋಮವಾರ ಹೇಳಿದ್ದಾರೆ.
2019ರ ಆಗಸ್ಟ್ 10ರಂದು ನ್ಯೂಯಾರ್ಕ್ ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದ ತನ್ನ ಕೋಣೆಯಲ್ಲಿ ಎಪ್ಸ್ಟೀನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಬಳಿಕ ನಡೆದ ಶವಪರೀಕ್ಷೆಯಲ್ಲಿ ಆತನ ಸಾವು ಆತ್ಮಹತ್ಯೆ ಎಂದು ತೀರ್ಮಾನಿಸಲಾಗಿತ್ತು.
ಎಪ್ಸ್ಟೀನ್ ನ ಸಾವು ಹಲವು ವರ್ಷಗಳಿಂದ ಪಿತೂರಿ ಸಿದ್ಧಾಂತಗಳಿಗೆ ಕಾರಣವಾಗಿದೆ. ಪ್ರಮುಖ ವ್ಯಕ್ತಿಗಳ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪುರಾವೆಗಳು ಆತನ ಬಳಿ ಇದ್ದ ಕಾರಣ, ಅವು ಬಹಿರಂಗವಾಗುವುದನ್ನು ತಡೆಯಲು ಎಪ್ಸ್ಟೀನ್ ನನ್ನು ಕೊಲೆ ಮಾಡಲಾಗಿದೆ ಎಂಬ ವಾದವೂ ಕೇಳಿಬಂದಿದೆ.
ಎಪ್ಸ್ಟೀನ್ ಮೃತಪಟ್ಟ ದಿನ ಆತನ ಕೋಣೆಯ ಹೊರಭಾಗದಲ್ಲಿದ್ದ ಭದ್ರತಾ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಕುರಿತು 2023ರಲ್ಲಿ ಪ್ರಕಟವಾದ ಅಮೆರಿಕದ ನ್ಯಾಯ ಇಲಾಖೆಯ ವರದಿಯು, ಬಂಧನ ಕೇಂದ್ರದ ಭದ್ರತಾ ಕ್ಯಾಮೆರಾಗಳಲ್ಲಿ ದೀರ್ಘಕಾಲದಿಂದ ತಾಂತ್ರಿಕ ಸಮಸ್ಯೆಗಳಿದ್ದವು ಎಂದು ತಿಳಿಸಿತ್ತು.
ಫ್ರೀಮನ್ ಅವರ ಹೇಳಿಕೆಯ ಬೆನ್ನಲ್ಲೇ ಎಪ್ಸ್ಟೀನ್ ನ ಸಹೋದರ ಮಾರ್ಕ್, ಸಾವಿನ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಬಟ್ಟೆಯಿಂದ ಮಾಡಿದ ಕುಣಿಕೆಯನ್ನು ಬಳಸಿ ಎಪ್ಸ್ಟೀನ್ ನ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಲಾಗಿದೆ. ಬಳಿಕ ಅದೇ ಬಟ್ಟೆಯನ್ನು ಬಳಸಿ ಅವರ ದೇಹವನ್ನು ಬಂಕ್ ಹಾಸಿಗೆಯಿಂದ ನೇತುಹಾಕಲಾಗಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಫ್ರೀಮನ್ ಹೇಳಿದ್ದಾರೆ.
ಆದರೆ, ಎಪ್ಸ್ಟೀನ್ ಸಾವಿನ ಕುರಿತು ಈ ಹಿಂದೆ ನೀಡಿದ್ದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ನ್ಯೂಯಾರ್ಕ್ ನಗರದ ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿ ತಿಳಿಸಿದೆ.






