ಟ್ರಂಪ್ ಒತ್ತಡಕ್ಕೆ ಮಣಿದ EU; ಅಮೆರಿಕ ವ್ಯಾಪಾರ ಒಪ್ಪಂದ ಜಾರಿಗೆ ಸಮ್ಮತಿ

ಡೊನಾಲ್ಡ್ ಟ್ರಂಪ್ | Photo Credit : AP
ಬ್ರಸೆಲ್ಸ್, ಮೇ 20: ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವನ್ನು ಅನುಷ್ಠಾನಗೊಳಿಸಲು ಯುರೋಪಿಯನ್ ಯೂನಿಯನ್ನ ಸಂಸದರು ಮತ್ತು ಸದಸ್ಯ ರಾಷ್ಟ್ರಗಳು ಬುಧವಾರ ಸಮ್ಮತಿಸಿವೆ. ಜುಲೈ 4ರೊಳಗೆ ಒಪ್ಪಂದವನ್ನು ಅನುಷ್ಠಾನಗೊಳಿಸದಿದ್ದರೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ್ದರು.
27 ರಾಷ್ಟ್ರಗಳು ಸದಸ್ಯತ್ವ ಹೊಂದಿರುವ ಯುರೋಪಿಯನ್ ಯೂನಿಯನ್ ಕಳೆದ ಜುಲೈಯಲ್ಲಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಬಹುತೇಕ ಯುರೋಪಿಯನ್ ಸರಕುಗಳ ಮೇಲೆ ಶೇ. 15 ಸುಂಕವನ್ನು ನಿಗದಿಪಡಿಸಿತ್ತು. ಆದರೆ ಪ್ರತಿಯಾಗಿ ಅಮೆರಿಕದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ರದ್ದುಗೊಳಿಸುವ ವಾಗ್ದಾನವನ್ನು ಇನ್ನೂ ಪೂರೈಸಿರಲಿಲ್ಲ.
‘ಮಂಗಳವಾರ ತಡರಾತ್ರಿಯವರೆಗೆ ನಡೆದ ಸಭೆಯ ಬಳಿಕ ಯುರೋಪಿಯನ್ ಯೂನಿಯನ್ (ಇಯು) ತನ್ನ ನಿಲುವಿಗೆ ಬದ್ಧತೆಯನ್ನು ಎತ್ತಿಹಿಡಿದಿದೆ. ಸ್ಥಿರ, ನಿರೀಕ್ಷಿತ ಮತ್ತು ಸಮತೋಲಿತ ಅಟ್ಲಾಂಟಿಕ್ ಪಾಲುದಾರಿಕೆಯನ್ನು ನಿರ್ವಹಿಸುವುದು ಎರಡೂ ಕಡೆಯ ಹಿತಾಸಕ್ತಿಗೆ ಪೂರಕವಾಗಿದೆ’ ಎಂದು ಇಯು ಒಕ್ಕೂಟದ ಹಾಲಿ ಅಧ್ಯಕ್ಷ ಸ್ಥಾನದಲ್ಲಿರುವ ಸೈಪ್ರಸ್ ದೇಶದ ಸಚಿವ ಮೈಕೆಲ್ ಡ್ಯಮಿನೋಸ್ ಘೋಷಿಸಿದ್ದಾರೆ.
ಅಮೆರಿಕವು ತನ್ನ ಬದ್ಧತೆಗಳನ್ನು ಪೂರೈಸುವಲ್ಲಿ ವಿಫಲವಾದಲ್ಲಿ ಅಥವಾ ಇಯು ಜೊತೆಗಿನ ವ್ಯಾಪಾರ ಅಥವಾ ಹೂಡಿಕೆಯನ್ನು ಅಡ್ಡಿಪಡಿಸಿದರೆ, ಒಪ್ಪಂದವನ್ನು ಅಮಾನತುಗೊಳಿಸುವ ಕಾರ್ಯವಿಧಾನವನ್ನು ಪ್ರಚೋದಿಸಲು ಒಪ್ಪಂದವು ಯುರೋಪಿಯನ್ ಯೂನಿಯನ್ಗೆ ಅವಕಾಶ ನೀಡುತ್ತದೆ.






