ಗಾಝಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ಇಸ್ರೇಲ್ ಜೊತೆಗಿನ ವ್ಯಾಪಾರ ಒಪ್ಪಂದ ಮುಂದುವರಿಕೆ ಕುರಿತು ಯುರೋಪಿಯನ್ ಒಕ್ಕೂಟ ಪರಿಶೀಲನೆ

Photo credit: PTI
ಬ್ರಸೆಲ್ಸ್ : ಗಾಝಾದಲ್ಲಿ ಇಸ್ರೇಲ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಸಾಧ್ಯತೆ ಇದೆ ಎಂದು ಯುರೋಪಿಯನ್ ಒಕ್ಕೂಟದ ವರದಿಯು ತಿಳಿಸಿದೆ. ಇಸ್ರೇಲ್ ಜೊತೆಗೆ ಮಾಡಿಕೊಂಡಿರುವ ಪ್ರಮುಖ ವ್ಯಾಪಾರ ಒಪ್ಪಂದವನ್ನು ರದ್ದುಪಡಿಸುವ ಬಗ್ಗೆ ಯುರೋಪಿಯನ್ ಒಕ್ಕೂಟ ಪರಿಶೀಲನೆ ಮಾಡುತ್ತಿದೆ ಎಂದು ಸೋರಿಕೆಯಾದ ಮಾಹಿತಿಯನ್ನು ಉಲ್ಲೇಖಿಸಿ ʼದಿ ಗಾರ್ಡಿಯನ್ ವರದಿʼ ಮಾಡಿದೆ.
ಗಾಝಾದಲ್ಲಿ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಯು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳ ಜೊತೆ ಮಾಡಿಕೊಂಡ ಪ್ರಮುಖ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ವರದಿಯು ಹೇಳಿದೆ.
ಯುರೋಪಿಯನ್ ಒಕ್ಕೂಟದ ʼವಿದೇಶಾಂಗ ನೀತಿ ಸೇವೆʼ ಈ ಕುರಿತ ವರದಿಯನ್ನು ಸಿದ್ದಪಡಿಸಿದೆ. ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರು ಈ ವರದಿಯನ್ನು ಸೋಮವಾರ ಮಂಡಿಸಲಿದ್ದಾರೆ. ಒಕ್ಕೂಟ ಸದಸ್ಯ ರಾಷ್ಟ್ರಗಳು ಈ ಕುರಿತು ಚರ್ಚೆ ನಡೆಸಲಿದೆ.
2023ರ ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಗೆ ಇಸ್ರೇಲ್ ನೀಡಿದ ಪ್ರತಿಕ್ರಿಯೆಯು ಅಸಮಾನ ಬಲಪ್ರಯೋಗ, ನಾಗರಿಕ ಮೂಲಸೌಕರ್ಯಗಳ ವ್ಯಾಪಕ ನಾಶ ಮತ್ತು ಮಾನವೀಯ ನೆರವಿಗೆ ವ್ಯವಸ್ಥಿತ ಅಡಚಣೆಯನ್ನು ಒಳಗೊಂಡಿತ್ತು ಎಂದು European External Action Service (EEAS) ಹೇಳಿದೆ.
ಯುರೋಪಿಯನ್ ಒಕ್ಕೂಟ-ಇಸ್ರೇಲ್ ಅಸೋಸಿಯೇಷನ್ ಒಪ್ಪಂದದ ಆರ್ಟಿಕಲ್ 2 ಅನ್ನು ಉಲ್ಲಂಘಿಸಿದೆ ಎಂದು ವರದಿಯು ಹೇಳುತ್ತದೆ. 1995ರಲ್ಲಿ ಸಹಿ ಹಾಕಲಾದ ಆ ಒಪ್ಪಂದವು ಇಸ್ರೇಲ್ ಮತ್ತು 27 ಸದಸ್ಯ ಬಣದ ನಡುವಿನ 68 ಬಿಲಿಯನ್ ಯೂರೋ ವ್ಯಾಪಾರ ಸಂಬಂಧದ ಒಪ್ಪಂದವಾಗಿದೆ.
ಈ ವರದಿಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಶೋಧನೆಗಳನ್ನು ಆಧರಿಸಿ ಸಿದ್ದಪಡಿಸಲಾಗಿದೆ ಎಂದು ʼದಿ ಗಾರ್ಡಿಯನ್ʼ ವರದಿ ಮಾಡಿದೆ.
ಇಸ್ರೇಲ್ನ ಸಾಂಪ್ರದಾಯಿಕ ನಿಕಟ ಮಿತ್ರ ರಾಷ್ಟ್ರವಾದ ನೆದರ್ಲ್ಯಾಂಡ್ ಸೇರಿದಂತೆ ಯುರೋಪಿಯನ್ ಒಕ್ಕೂಟದ 17 ಸದಸ್ಯ ರಾಷ್ಟ್ರಗಳು ಗಾಝಾದಲ್ಲಿ ಇಸ್ರೇಲ್ನ ಮಿಲಿಟರಿ ಕ್ರಮಗಳು ಮತ್ತು ದಿಗ್ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಅಕ್ಟೋಬರ್ 2023ರಿಂದ ಗಾಝಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 55,600ಕ್ಕೂ ಅಧಿಕ ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇರಾನ್ ಜೊತೆಗಿನ ಸಂಘರ್ಷದ ಸಂದರ್ಭದಲ್ಲಿ ಇಸ್ರೇಲ್ನ ಆತ್ಮರಕ್ಷಣೆಯ ಹಕ್ಕನ್ನು ಯುರೋಪಿಯನ್ ಒಕ್ಕೂಟದ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಪುನರುಚ್ಚರಿಸಿದ್ದರೂ, ಗಾಝಾದಲ್ಲಿನ ಮಾನವೀಯ ಬಿಕ್ಕಟ್ಟಿಗೆ ಯುರೋಪ್ನ ಮೌನ ಪ್ರತಿಕ್ರಿಯೆಯ ಬಗ್ಗೆ ಟೀಕೆಗಳು ಹೆಚ್ಚಿವೆ. ಅಮ್ನೆಸ್ಟಿ ಇಂಟರ್ನ್ಯಾಷನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್ ಸೇರಿದಂತೆ 100ಕ್ಕೂ ಹೆಚ್ಚು ನಾಗರಿಕ ಸಮಾಜ ಸಂಸ್ಥೆಗಳು ಇತ್ತೀಚೆಗೆ ಯುರೋಪಿಯನ್ ಒಕ್ಕೂಟಕ್ಕೆ ಒಪ್ಪಂದವನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿವೆ, ವ್ಯಾಪಾರವನ್ನು ಮುಂದುವರಿಸುವುದರಿಂದ ಯುರೋಪಿಯನ್ ಒಕ್ಕೂಟದ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತದೆ ಎಂದು ಹೇಳಿತ್ತು.







