ತನ್ನ ವಿರುದ್ದದ ಯುದ್ದಕ್ಕೆ ತಾನೇ ಹಣ ನೀಡುತ್ತಿರುವ ಯುರೋಪ್: ಭಾರತ-ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಮೆರಿಕಾ ಆಕ್ರೋಶ

Photo Credit ; PTI
ವಾಷಿಂಗ್ಟನ್, ಜ.27: ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ವಿಸ್ತರಿಸುವ ಮೂಲಕ ಯುರೋಪ್ ಪರೋಕ್ಷವಾಗಿ ರಶ್ಯ-ಉಕ್ರೇನ್ ಯುದ್ದಕ್ಕೆ ಹಣಕಾಸು ನೀಡುತ್ತಿದೆ ಎಂದು ಅಮೆರಿಕಾದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಕಿಡಿಕಾರಿದ್ದಾರೆ.
ಭಾರತ- ಯುರೋಪಿಯನ್ ಯೂನಿಯನ್ ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಂಗಳವಾರ ಹೊಸದಿಲ್ಲಿಯಲ್ಲಿ ಸಹಿ ಬೀಳುವುದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಬೆಸೆಂಟ್ `ಯುರೋಪ್ ರಶ್ಯದಿಂದ ನೇರ ಇಂಧನ ಆಮದುಗಳನ್ನು ಕಡಿಮೆ ಮಾಡಿರಬಹುದು. ಆದರೆ ಭಾರತದಲ್ಲಿ ಸಂಸ್ಕರಿಸಿದ ರಶ್ಯಾದ ಕಚ್ಛಾ ತೈಲ ಮೂಲದ ತೈಲ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸಿದೆ. ಇದು ಅಂತಿಮವಾಗಿ ರಶ್ಯದ ಇಂಧನ ಆದಾಯಗಳನ್ನು ಕಡಿಮೆಗೊಳಿಸುವ ಪಾಶ್ಚಿಮಾತ್ಯರ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ' ಎಂದಿದ್ದಾರೆ.
ರಶ್ಯದ ಇಂಧನ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ಕಡಿದಾದ ಸುಂಕಗಳನ್ನು ವಿಧಿಸುವುದು ಸೇರಿದಂತೆ ರಶ್ಯದ ಇಂಧನ ವ್ಯಾಪಾರವನ್ನು ಅಡ್ಡಿಪಡಿಸಲು ಅಮೆರಿಕಾ ಬಲವಾದ ಕ್ರಮಗಳನ್ನು ಕೈಗೊಂಡಿದೆ. ರಶ್ಯದ ತೈಲ ಖರೀದಿಸಿದ್ದಕ್ಕೆ ಭಾರತದ ಮೇಲೆ 25% ಸುಂಕ ವಿಧಿಸಿದ್ದೇವೆ. ಆದರೆ ಈಗ ಏನಾಯಿತು? ಯುರೋಪ್ ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಒಂದಂತೂ ಸ್ಪಷ್ಟವಾಗಿದೆ. ರಶ್ಯದ ತೈಲ ಭಾರತಕ್ಕೆ ಹೋಗುತ್ತದೆ. ಅಲ್ಲಿಂದ ಸಂಸ್ಕರಿಸಿದ ಉತ್ಪನ್ನಗಳನ್ನು ಯುರೋಪಿಯನ್ನರು ಖರೀದಿಸುತ್ತಾರೆ. ತಮ್ಮ ವಿರುದ್ದದ ಯುದ್ದಕ್ಕೇ ಅವರು ಹಣ ಒದಗಿಸುತ್ತಿದ್ದಾರೆ. ರಶ್ಯ-ಉಕ್ರೇನ್ ಸಂಘರ್ಷ ಅಂತ್ಯಗೊಳಿಸಲು ಕೆಲಸ ಮಾಡುವಾಗ ಯುರೋಪಿಯನ್ ಪಾಲುದಾರರಿಗಿಂತ ಅಮೆರಿಕಾ ಹೆಚ್ಚಿನ ಆರ್ಥಿಕ ತ್ಯಾಗಗಳನ್ನು ಮಾಡಿದೆ ಎಂದು ಬೆಸೆಂಟ್ ಪ್ರತಿಪಾದಿಸಿದ್ದಾರೆ.
ಭಾರತ- ಯುರೋಪಿಯನ್ ಯೂನಿಯನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ `ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್' ಎಂದು ಬಣ್ಣಿಸಿದ್ದಾರೆ.







