ಪಾಕ್ ವಾಯು ಪ್ರದೇಶದಿಂದ ದೂರ ಸರಿಯುತ್ತಿರುವ ಯೂರೋಪಿಯನ್ ವಿಮಾನಗಳು!

ಸಾಂದರ್ಭಿಕ ಚಿತ್ರ PC: freepik
ಹೊಸದಿಲ್ಲಿ: ಭಾರತೀಯ ವಿಮಾನಗಳು ತನ್ನ ವಾಯುಪ್ರದೇಶ ಪ್ರವೇಶಿಸುವುದನ್ನು ಪಾಕಿಸ್ತಾನ ನಿಷೇಧಿಸಿದ ಬೆನ್ನಲ್ಲೇ, ಯೂರೋಪ್ ಮತ್ತು ಬ್ರಿಟಿಷ್ ವಿಮಾನಗಳು ಕೂಡಾ ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಹಾರಾಡುವುದನ್ನು ತಪ್ಪಿಸಿಕೊಳ್ಳುತ್ತಿವೆ. ಸ್ವಿಸ್ ಸೇರಿದಂತೆ ಲುಫ್ತಾನ್ಸಾ ಸಮೂಹ ಕೂಡಾ ಈ ನಡೆಯನ್ನು ದೃಢಪಡಿಸಿದೆ.
"ಏರ್ ಫ್ರಾನ್ಸ್, ಬ್ರಿಟಿಷ್ ಏರ್ವೇಸ್ ಮತ್ತು ಸ್ವಿಸ್ ವಿಮಾನಗಳು ತಮ್ಮ ವಾಯುಮಾರ್ಗವನ್ನು ಏಪ್ರಿಲ್ 30ರಿಂದ ಬದಲಿಸಿಕೊಂಡು ಪಾಕಿಸ್ತಾನದ ವಾಯು ಪ್ರದೇಶದಲ್ಲಿ ಹಾರಾಡುವುದನ್ನು ತಪ್ಪಿಸಿವೆ. ಉತ್ತರ ಪಾಕಿಸ್ತಾನದ ಕೆಲ ವಾಯು ಯಾನದ ಬಗ್ಗೆ ನೋಟಂ ಲಭ್ಯವಾಗಿಲ್ಲ; ಈ ಕಾರಣದಿಂದ ಇಲ್ಲಿ ಕೂಡಾ ಪಾಕ್ ವಾಯುಪ್ರದೇಶವನ್ನು ಹೊರತುಪಡಿಲಾಗಿದೆ ಎಂಬ ಅಭಿಪ್ರಾಯಕ್ಕೆ ಬರಬಹುದು" ಎಂದು ವಿಮಾನಯಾನ ಟ್ರ್ಯಾಕಿಂಗ್ ಸೈಟ್ ಫ್ಲೈಟ್ ರಾಡಾರ್24 ವರದಿ ಮಾಡಿದೆ. ಲುಫ್ತಾನ್ಸಾ , ಐಟಿಎ ಏರ್ವೇಸ್ ಮತ್ತು ಎಲ್ಓಟಿ ಕೂಡಾ ಮೇ 2ರಿಂದ ಈ ಪಟ್ಟಿಗೆ ಸೇರಿವೆ. ನೋಟಂ ಅಂದರೆ ವಿಮಾನಮಾರ್ಗದಲ್ಲಿ ಸಂಭಾವ್ಯ ಅಪಾಯಗಳ ಬಗ್ಗೆ ಪೈಲಟ್ ಗಳಿಗೆ ನೀಡುವ ಎಚ್ಚರಿಕೆಯಾಗಿದೆ.
ಕೆಲ ವಿಮಾನಗಳು ನೋಟಂ ಪಡೆಯದಿದ್ದರೂ ಪಾಕಿಸ್ತಾನದ ಮೂಲಕ ಹಾರಾಟವನ್ನು ತಪ್ಪಿಸಿವೆ. ಇವುಗಳಲ್ಲಿ ಲುಫ್ತಾನಾದ ಮ್ಯೂನಿಚ್-ದೆಹಲಿ, ಫ್ರಾಂಕ್ಫರ್ಟ್- ಮುಂಬೈ ಮತ್ತು ಬ್ಯಾಂಕಾಕ್-ಮ್ಯೂನಿಚ್ ವಿಮಾನಗಳು ಸೇರಿವೆ. ಎಲ್ಓಟಿಯ ವಾರ್ಸೋ-ದೆಹಲಿ ಮತ್ತು ಐಟಿಎಯ ರೋಮ್-ದೆಹಲಿ ವಿಮಾನಗಳು ಕೂಡಾ ಪಥ ಬದಲಿಸಿವೆ. ಇದರಿಂದಾಗಿ ಈ ವಿಮಾನಗಳ ಹಾರಾಟ ಸಮಯ ಒಂದು ಗಂಟೆ ಅಧಿಕವಾಗಲಿದೆ.
ಪ್ರತಿ ದೇಶಗಳೂ ಯಾವುದೇ ಪ್ರದೇಶದಲ್ಲಿ ತಮ್ಮ ವಿಮಾನಗಳು ಹಾರಾಟ ನಡೆಸುವ ಸಂದರ್ಭದಲ್ಲಿ ತಮ್ಮದೇ ಆದ ಅಪಾಯ ಸಾಧ್ಯತೆ ಸಮೀಕ್ಷೆಯನ್ನು ನಡೆಸುತ್ತವೆ. ಒಂದು ವೇಳೆ ಅಸುರಕ್ಷಿತ ಎಂದು ಕಂಡುಬಂದರೆ ನೋಟಂ ಇಲ್ಲದೆಯೇ ವಿಮಾನ ಆ ಪ್ರದೇಶದ ಮೂಲಕ ಹಾದುಹೋಗದಂತೆ ಎಚ್ಚರ ವಹಿಸುತ್ತವೆ. "ನಾವು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದೇವೆ. ಭಾರತ-ಪಾಕಿಸ್ತಾನ ಸಂಘರ್ಷ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಎಲ್ಲ ವಿಮಾನಗಳು ಸಂಘರ್ಷ ವಲಯದಿಂದ ಪರ್ಯಾಯ ಮಾರ್ಗವನ್ನು ಕಂಡುಕೊಂಡಿವೆ. ಸಂಘರ್ಷ ಉಲ್ಬಣಗೊಂಡ ತಕ್ಷಣ ಪ್ರತಿ ವಿಮಾನಯಾನ ಕಂಪನಿಗಳು ಕೊನೆ ಕ್ಷಣದಲ್ಲಿ ಪಥ ಬದಲಿಸುವ ನಿರ್ಧಾರಕ್ಕೆ ಬಂದಿವೆ" ಎಂದು ಪ್ರಮುಖ ಪಾಶ್ಚಿಮಾತ್ಯ ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.







