ಕೆನಡಾವನ್ನು ಯುರೋಪಿಯನ್ ಒಕ್ಕೂಟದೊಂದಿಗೆ ವಿಶೇಷ ಸಹಭಾಗಿತ್ವ ಹೊಂದಿರುವ ರಾಷ್ಟ್ರವನ್ನಾಗಿಸುವ ಪ್ರಸ್ತಾವ; ಪ್ರಧಾನಿ ಕಾರ್ನಿಗೆ ಸಂಸದರಿಂದ ಎದ್ದು ನಿಂತು ಗೌರವ
ಅಮೆರಿಕ–ಚೀನಾದಿಂದ ಹೆಚ್ಚುತ್ತಿರುವ ಒತ್ತಡದ ನಡುವೆ ಸಂಬಂಧ ಬಲಪಡಿಸಲು EU ಒಲವು

Screengrab
ಬ್ರಸೆಲ್ಸ್, ಸೆ.17: ಯುರೋಪಿಯನ್ ಸಂಸತ್ತಿನಲ್ಲಿ ವಾರ್ಷಿಕ ‘ಸ್ಟೇಟ್ ಆಫ್ ದಿ ಯೂನಿಯನ್’ ಭಾಷಣಕ್ಕೆ ಆಗಮಿಸಿದ್ದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರಿಗೆ ಯುರೋಪಿಯನ್ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರು ಕಾರ್ನಿ ಅವರನ್ನು ಅಪ್ಪಿಕೊಂಡರು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದೇ ವೇಳೆ, ಕೆನಡಾವನ್ನು ಯುರೋಪಿಯನ್ ಒಕ್ಕೂಟ(EU)ದೊಂದಿಗೆ ವಿಶೇಷ ಸಹಭಾಗಿತ್ವ ಹೊಂದಿರುವ ರಾಷ್ಟ್ರವನ್ನಾಗಿಸುವ ಪ್ರಸ್ತಾವವನ್ನು ವಾನ್ ಡೆರ್ ಲೇಯನ್ ಮುಂದಿಟ್ಟರು.
EUನ ಪೂರ್ಣ ಸದಸ್ಯತ್ವ ನೀಡದೆ, ಒಕ್ಕೂಟದೊಂದಿಗೆ ಕೆನಡಾದ ರಾಜಕೀಯ, ರಕ್ಷಣಾ, ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ಉದ್ದೇಶದಿಂದ ಈ ಪ್ರಸ್ತಾವ ಮಾಡಲಾಗಿದೆ. ಆದರೆ ಈ ವಿಶೇಷ ಸಹಭಾಗಿತ್ವದ ನಿಖರ ಸ್ವರೂಪ ಹೇಗಿರಲಿದೆ ಎಂಬುದನ್ನು ವಾನ್ ಡೆರ್ ಲೇಯನ್ ವಿವರಿಸಿಲ್ಲ.
ವಿಶ್ವದಲ್ಲಿ ವೈರತ್ವ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಿತ್ರರಾಷ್ಟ್ರಗಳ ನಡುವೆ ಹೊಸ ಸಂಪರ್ಕಗಳನ್ನು ಬೆಳೆಸುವ ಪ್ರಯತ್ನದ ಭಾಗವಾಗಿ ಈ ಪ್ರಸ್ತಾವ ಮಾಡಲಾಗಿದೆ ಎಂದು ಅವರು ಹೇಳಿದರು.
ಸ್ಟ್ರಾಸ್ ಬರ್ಗ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಾನ್ ಡೆರ್ ಲೇಯನ್, “ಜಗತ್ತಿನಲ್ಲಿ ಪರಿಸ್ಥಿತಿ ಹೆಚ್ಚು ಅಸ್ಥಿರವಾಗಿರುವ ಸಂದರ್ಭದಲ್ಲಿ” ಹೊಸ ಪಾಲುದಾರಿಕೆಗಳ ಅಗತ್ಯವಿದೆ ಎಂದರು.
“ನಮ್ಮ ಪಾಲುದಾರಿಕೆಗಳನ್ನು ನಾವು ತುರ್ತಾಗಿ ಮರುರೂಪಿಸಿಕೊಳ್ಳಬೇಕು ಎಂದು ನಾನು ಹೇಳಿದ್ದೆ. ಆದ್ದರಿಂದ, ಕೆನಡಾವು EUನೊಂದಿಗೆ ವಿಶೇಷ ಸಹಭಾಗಿತ್ವ ಹೊಂದಿರುವ ರಾಷ್ಟ್ರವಾಗಲು ದಾರಿ ಮಾಡಿಕೊಡುವ ನಿಟ್ಟಿನಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ,” ಎಂದು ಅವರು ಹೇಳಿದರು.
►ಯುರೋಪ್–ಕೆನಡಾ ಒಂದೇ ದೃಷ್ಟಿಕೋನ
“EU ಮತ್ತು ಕೆನಡಾ ಜಗತ್ತನ್ನು ಒಂದೇ ದೃಷ್ಟಿಕೋನದಿಂದ ನೋಡುತ್ತವೆ. ಕೃತಕ ಬುದ್ಧಿಮತ್ತೆ (AI)ಯಿಂದ ಹವಾಮಾನ ಬದಲಾವಣೆಯವರೆಗೆ, ಆರ್ಕ್ಟಿಕ್ ನಿಂದ ಭೌಗೋಳಿಕ ರಾಜಕೀಯದವರೆಗೆ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಉಕ್ರೇನ್ ವಿಷಯದಲ್ಲಿ, ರಕ್ಷಣಾ ವಲಯದಲ್ಲಿ, ಕಚ್ಚಾ ವಸ್ತುಗಳು ಮತ್ತು ಪೂರೈಕೆ ಸರಪಳಿಗಳ ವಿಷಯದಲ್ಲಿ ನಾವು ಒಟ್ಟಾಗಿ ನಿಂತಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ, ಯುರೋಪ್ ಮತ್ತು ಕೆನಡಾ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿವೆ,” ಎಂದು ವಾನ್ ಡೆರ್ ಲೇಯನ್ ಹೇಳಿದರು.
ಭವಿಷ್ಯದಲ್ಲಿ “ಹೆಚ್ಚು ಬಲವಾದ ಮತ್ತು ಮಹತ್ವಾಕಾಂಕ್ಷೆಯ ಮೈತ್ರಿ” ನಿರ್ಮಿಸುವ ವಾನ್ ಡೆರ್ ಲೇಯನ್ ಅವರ ಪ್ರಸ್ತಾವನೆಯನ್ನು ಕಾರ್ನಿ ಸ್ವಾಗತಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
“ಕೆನಡಾ ಮತ್ತು ಯುರೋಪ್ ತಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನು ಪರಸ್ಪರ ಸಹಕಾರದ ಮೂಲಕ ಭದ್ರಪಡಿಸಿಕೊಳ್ಳಬೇಕು,” ಎಂದು ಕಾರ್ನಿ ಅವರ ಕಚೇರಿ ಹೇಳಿದೆ.
ಆದರೆ, ವಾನ್ ಡೆರ್ ಲೇಯನ್ ಪ್ರಸ್ತಾಪಿಸಿದ ವಿಶೇಷ ಸಹಭಾಗಿತ್ವದ ನಿಖರ ಸ್ವರೂಪದ ಬಗ್ಗೆ ಕಾರ್ನಿ ತಮ್ಮ ಹೇಳಿಕೆಯಲ್ಲಿ ಪ್ರಸ್ತಾಪಿಸಲಿಲ್ಲ.
►ಟ್ರಂಪ್ ರಿಂದ ಕಠಿಣ ಸುಂಕದ ಎಚ್ಚರಿಕೆ
EU ಈ ಪ್ರಸ್ತಾವನೆಯೊಂದಿಗೆ ಮುಂದುವರಿದರೆ ಕ್ರಮ ಕೈಗೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
“ಅವರು ಹಾಗೆ ಮಾಡಿದರೆ ಅಥವಾ ಅದು ನನಗೆ ಪ್ರತಿಕೂಲ ಕ್ರಮವೆಂದು ಅನ್ನಿಸಿದರೆ, ನಾನು ಬಹಳ ಕಠಿಣ ಸುಂಕಗಳನ್ನು ವಿಧಿಸುತ್ತೇನೆ ಅಥವಾ ಅನೇಕ ವಿಷಯಗಳಲ್ಲಿ ಯುರೋಪ್ನೊಂದಿಗಿನ ವ್ಯಾಪಾರವನ್ನು ನಿಲ್ಲಿಸುತ್ತೇನೆ,” ಎಂದು ನಾರ್ತ್ ಕರೊಲಿನಾದಲ್ಲಿನ ಕಾರ್ಯಕ್ರಮವೊಂದಕ್ಕೆ ತೆರಳುವಾಗ ಟ್ರಂಪ್ ಸುದ್ದಿಗಾರರಿಗೆ ಹೇಳಿದರು.
ಕೆನಡಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು ಕಳೆದ ತಿಂಗಳು ವಿಫಲಗೊಂಡ ಬಳಿಕ ಕಾರ್ನಿ ಅವರ ಯುರೋಪ್ ಪ್ರವಾಸ ನಡೆದಿದೆ. ಈ ವೈಫಲ್ಯವು ಎರಡೂ ದೇಶಗಳು ಪರಸ್ಪರ ಸುಂಕ ವಿಧಿಸುವ ಕ್ರಮಗಳ ಸರಣಿಗೆ ಕಾರಣವಾಗಿತ್ತು.
ಹೆಚ್ಚುತ್ತಿರುವ ವ್ಯಾಪಾರ ಸಂಘರ್ಷದ ನಡುವೆ ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕೆನಡಾ ಮುಂದಾಗಿದೆ.
ಮುಂದಿನ ದಶಕದಲ್ಲಿ ಅಮೆರಿಕೇತರ ದೇಶಗಳೊಂದಿಗೆ ಕೆನಡಾ ನಡೆಸುವ ವ್ಯಾಪಾರವನ್ನು ದ್ವಿಗುಣಗೊಳಿಸುವುದಾಗಿ ಕಾರ್ನಿ ಪ್ರತಿಜ್ಞೆ ಮಾಡಿದ್ದಾರೆ.
►ರಕ್ಷಣೆ, ತಂತ್ರಜ್ಞಾನದಲ್ಲಿ ಸಹಕಾರ
EU ಮತ್ತು ಕೆನಡಾ ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲಿವೆ ಎಂದು ವಾನ್ ಡೆರ್ ಲೇಯನ್ ಹೇಳಿದರು.
“ಉತ್ಪಾದನಾ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸುವ ಕೆಲಸ ಮಾಡುತ್ತೇವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈತ್ರಿ ರಚಿಸುತ್ತೇವೆ. ರಕ್ಷಣಾ ಕೈಗಾರಿಕೆಗಳಲ್ಲಿ ಪರಸ್ಪರ ಸಹಕಾರ ಹೆಚ್ಚಿಸುತ್ತೇವೆ. ಆರ್ಕ್ಟಿಕ್ ಪ್ರದೇಶದಲ್ಲಿ ಪ್ರಮುಖ ಜಂಟಿ ಯೋಜನೆ ಕೈಗೊಳ್ಳುತ್ತೇವೆ,” ಎಂದು ಅವರು ಹೇಳಿದರು.
“ಯುರೋಪ್ ಗೆ ಇತರ ದೇಶಗಳೊಂದಿಗೆ ಪಾಲುದಾರಿಕೆ ಹೊಂದುವುದು ಕಾರ್ಯತಂತ್ರದ ಅಗತ್ಯವಾಗಿದೆ. ಅಂತರರಾಷ್ಟ್ರೀಯ ನಿಯಮಾಧಾರಿತ ವ್ಯವಸ್ಥೆಯಲ್ಲಿ ಉಂಟಾಗಿರುವ ಬಿರುಕುಗಳಿಗೆ ಈ ಪಾಲುದಾರಿಕೆಗಳು ನಮ್ಮ ಪ್ರತಿಕ್ರಿಯೆಯೂ ಆಗಿವೆ,” ಎಂದರು.
“ಈ ಪಾಲುದಾರಿಕೆ ಯಾರನ್ನೂ ಗುರಿಯಾಗಿಸಿಕೊಂಡಿಲ್ಲ,” ಎಂದು ವಾನ್ ಡೆರ್ ಲೇಯನ್ ಸ್ಪಷ್ಟಪಡಿಸಿದರು.
►ಉಕ್ರೇನ್ ಸ್ವಾಗತ
EU ಮತ್ತು ಕೆನಡಾ ನಡುವಿನ ಆಳವಾದ ಸಂಬಂಧಗಳನ್ನು ಉಕ್ರೇನ್ ಸ್ವಾಗತಿಸುತ್ತದೆ ಎಂದು ಉಕ್ರೇನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಜಿಯೋರ್ಹಿ ಟೈಖಿ ಹೇಳಿದರು.
“ನಾವು ಕೂಡ ಇದರಲ್ಲಿ ಆಸಕ್ತಿ ಹೊಂದಿದ್ದೇವೆ. ಇದು ನಿರ್ದಿಷ್ಟವಾಗಿ ಏನನ್ನು ಒಳಗೊಂಡಿರುತ್ತದೆ ಹಾಗೂ ಈ ಸಹಕಾರ ಎಷ್ಟು ಆಳವಾಗಿರುತ್ತದೆ ಎಂಬುದನ್ನು ಪರಿಶೀಲಿಸುತ್ತಿದ್ದೇವೆ,” ಎಂದು ಅವರು ಹೇಳಿದರು.
EU ಮತ್ತು ಕೆನಡಾ ನಡುವಿನ ಮುಂದಿನ ಬೆಳವಣಿಗೆಗಳನ್ನು ಉಕ್ರೇನ್ ನಿಕಟವಾಗಿ ಗಮನಿಸಲಿದೆ ಎಂದೂ ಅವರು ತಿಳಿಸಿದರು.






