ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಜೈಲಿನಲ್ಲಿ ಊಟ ಒದಗಿಸಲಾಗುತ್ತಿಲ್ಲ: ಆರೋಪ

ಇಸ್ಲಮಾಬಾದ್ : ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಜೈಲಿನಲ್ಲಿ `ಸಿ'ದರ್ಜೆಯ ಕೋಣೆಯಲ್ಲಿ ಇರಿಸಲಾಗಿದ್ದು ಅವರಿಗೆ ಸರಿಯಾಗಿ ಊಟವನ್ನೂ ಒದಗಿಸಲಾಗುತ್ತಿಲ್ಲ ಎಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಉಪಾಧ್ಯಕ್ಷ ಶಾ ಮಹ್ಮೂದ್ ಖುರೇಷಿ ಹೇಳಿದ್ದಾರೆ.
ಇಮ್ರಾನ್ ರನ್ನು ಬಂಧಿಸುವಂತೆ ನ್ಯಾಯಾಲಯ ಇಸ್ಲಮಾಬಾದ್ ನ ಪೊಲೀಸರಿಗೆ ಆದೇಶ ಜಾರಿಗೊಳಿಸಿದ್ದರೂ ಲಾಹೋರ್ ಪೊಲೀಸರು ತರಾತುರಿಯಲ್ಲಿ ಇಮ್ರಾನ್ ರ ಮನೆಗೆ ಬಂದು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇಮ್ರಾನ್ ರನ್ನು ಅಡಿಯಾಲ ಜೈಲಿನಲ್ಲಿ ಇರಿಸುವಂತೆ ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟವಾಗಿದ್ದರೂ ಅಟೋಕ್ ಜೈಲಿನಲ್ಲಿ ಇರಿಸಲಾಗಿದೆ. ಸೌಲಭ್ಯಗಳ ಕೊರತೆಯಿರುವ ಅಟೋಕ್ ಜೈಲಿನ `ಸಿ'ದರ್ಜೆಯ ಕೋಣೆಯಲ್ಲಿ ಇರಿಸಲಾಗಿರುವ ಇಮ್ರಾನ್ರನ್ನು ಭೇಟಿ ಮಾಡಲು ಅವರ ವಕೀಲರಿಗೂ ಅವಕಾಶ ನೀಡಲಾಗುತ್ತಿಲ್ಲ. ಬಂಧನವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬೇಕಿದ್ದರೆ ಪವರ್ ಆಫ್ ಅಟಾರ್ನಿಗೆ ಇಮ್ರಾನ್ ರ ಸಹಿ ಬೇಕಿದೆ ಎಂದು ಖುರೇಷಿ ಹೇಳಿದ್ದಾರೆ.
ಬಂಧನದ ಬಳಿಕ ಇಮ್ರಾನ್ ರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿತ್ತು. ಇದು ಕಡ್ಡಾಯ ಮತ್ತು ಪ್ರತಿಯೊಬ್ಬ ಕೈದಿಯ ಹಕ್ಕಾಗಿದೆ. ಆದರೆ ಜೈಲು ಅಧಿಕಾರಿಗಳು ಈ ನಿಯಮ ಉಲ್ಲಂಘಿಸಿದ್ದು ಇಮ್ರಾನ್ರ ಜೀವಕ್ಕೆ ಅಪಾಯವಿದೆ ಎಂಬುದನ್ನು ನ್ಯಾಯಾಲಯ ಗಮನಿಸಬೇಕು ಎಂದವರು ಆಗ್ರಹಿಸಿದ್ದಾರೆ.