Flydubai ವಿಮಾನದಲ್ಲಿ ಸಹ-ಪೈಲಟ್ ನಿಂದ ಕ್ಯಾಪ್ಟನ್ ಮೇಲೆ ದಾಳಿ: ಹಾನಿಗೊಳಗಾದ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಪೈಲಟ್ ಗಳಲ್ಲಿ ಮಾಜಿ ಕ್ರಿಕೆಟಿಗನ ಪುತ್ರ!

Photo Credit : NDTV
ದುಬೈ: 'ಫ್ಲೈದುಬೈ' ವಿಮಾನದಲ್ಲಿ ಸಹ-ಪೈಲಟ್ ಒಬ್ಬ ಭಾರತೀಯ ಕ್ಯಾಪ್ಟನ್ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ ಬಳಿಕ, ಹಾನಿಗೊಳಗಾದ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಇಬ್ಬರು ಪೈಲಟ್ ಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗನ ಪುತ್ರನೂ ಸೇರಿದ್ದಾರೆ. ಈ ಇಬ್ಬರು ಪೈಲಟ್ ಗಳನ್ನು ಪ್ರಯಾಣಿಕರ ಜೀವ ಉಳಿಸಿದ ಸಾಹಸಕ್ಕಾಗಿ ಯುಎಇ ಗೌರವಿಸಿದೆ.
ಕಳೆದ ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ ಗೆ ಪ್ರಯಾಣಿಸುತ್ತಿದ್ದ 'ಫ್ಲೈದುಬೈ'ಯ ಬೋಯಿಂಗ್ 737 ವಿಮಾನದಲ್ಲಿ ಈ ಘಟನೆ ನಡೆದಿತ್ತು. ವಿಮಾನದ ಸಹ-ಪೈಲಟ್ ಆಗಿದ್ದ ಒಮಾನ್ ಪ್ರಜೆ ಹಮಾಮ್ ಅಲ್-ಹಮಮಿ, ಕಾಕ್ ಪಿಟ್ ನಲ್ಲಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿದ್ದನು.
ಕಾಕ್ಪಿಟ್ ನಲ್ಲಿದ್ದ ತುರ್ತು ಬಳಕೆಯ ಕೊಡಲಿಯನ್ನು ತೆಗೆದುಕೊಂಡಿದ್ದ ಹಮಾಮ್, ಕ್ಯಾಪ್ಟನ್ ಅವರ ತಲೆಗೆ ಹಲವು ಬಾರಿ ಹೊಡೆದಿದ್ದನು ಎನ್ನಲಾಗಿದೆ. ಇದರಿಂದ ಮಚ್ಚಾರ್ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದರು.
ಈ ಸಂದರ್ಭದಲ್ಲಿ ವಿಮಾನದಲ್ಲಿ ಹೆಚ್ಚುವರಿ ಸಿಬ್ಬಂದಿಯಾಗಿ ಪ್ರಯಾಣಿಸುತ್ತಿದ್ದ ದಕ್ಷಿಣ ಆಫ್ರಿಕಾದ ರೋವನ್ ಟೂತ್ ಮತ್ತು ಫಿಜಿ ದೇಶದ ಹೆನ್ಸನ್ ಸ್ಟೀವನ್ ವಿಮಾನದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದರು. ಹಾನಿಗೊಳಗಾಗಿದ್ದ ವಿಮಾನವನ್ನು ಸೌದಿ ಅರೇಬಿಯದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದರು. ಬಳಿಕ ಪ್ರಯಾಣಿಕರನ್ನು ಟೆಲ್ ಅವೀವ್ ಗೆ ಕರೆದೊಯ್ಯಲು ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಗಿತ್ತು.
ಈ ಇಬ್ಬರು ಪೈಲಟ್ ಗಳ ಹೆಸರುಗಳನ್ನು ಅಕ್ಟೋಬರ್ 27ರಂದು ಬಹಿರಂಗಪಡಿಸಲಾಯಿತು. ಪ್ರಯಾಣಿಕರ ಜೀವ ಉಳಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ ಅವರಿಗೆ 'ಫಸ್ಟ್ ಕ್ಲಾಸ್ ಆರ್ಡರ್ ಆಫ್ ಝಾಯೆದ್ II' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೂ ಇದೇ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
►ಮಾಜಿ ಕ್ರಿಕೆಟಿಗನ ಪುತ್ರ
ಗೌರವಕ್ಕೆ ಪಾತ್ರರಾದ ರೋವನ್ ಟೂತ್ ದಕ್ಷಿಣ ಆಫ್ರಿಕಾದ ಪೈಲಟ್. ಕಳೆದ ವರ್ಷ ನಿಧನರಾದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಬ್ಯಾರಿ ಟೂತ್ ಅವರ ಪುತ್ರ. ಈ ಹಿಂದೆ ದಕ್ಷಿಣ ಆಫ್ರಿಕಾದ ವಿಮಾನಯಾನ ಸಂಸ್ಥೆ 'ಏರ್ ಲಿಂಕ್'ನಲ್ಲಿ ಕೆಲಸ ಮಾಡುತ್ತಿದ್ದ ಅವರು, 2023ರಲ್ಲಿ 'ಫ್ಲೈದುಬೈ' ಸಂಸ್ಥೆಯನ್ನು ಸೇರಿಕೊಂಡಿದ್ದರು. ದಕ್ಷಿಣ ಆಫ್ರಿಕಾದ ಮಾಧ್ಯಮ ವರದಿಗಳ ಪ್ರಕಾರ, ಅವರು ನಾರ್ದರ್ನ್ ಕೇಪ್ ಪ್ರಾಂತ್ಯದ ಕಿಂಬರ್ಲಿಯವರು.
ಇನ್ನೊಬ್ಬ ಪೈಲಟ್ ಹೆನ್ಸನ್ ಸ್ಟೀವನ್ ಫಿಜಿ ದೇಶದವರು. 'ಫ್ಲೈದುಬೈ' ಸಂಸ್ಥೆಗೆ ಸೇರುವ ಮೊದಲು ಅವರು 'ಫಿಜಿ ಏರ್ ವೇಸ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸೆಪ್ಟೆಂಬರ್ 30ರಂದು 'ಫ್ಲೈದುಬೈ'ಯ FZ1073 ವಿಮಾನದಲ್ಲಿ ಇಬ್ಬರೂ ಹೆಚ್ಚುವರಿ ಸಿಬ್ಬಂದಿಯಾಗಿ ಪ್ರಯಾಣಿಸುತ್ತಿದ್ದರು. ವಿಮಾನವು ವಾಪಸಾಗುವ ಸಂದರ್ಭದಲ್ಲಿ ಅದನ್ನು ಚಲಾಯಿಸುವ ಜವಾಬ್ದಾರಿ ಇವರದ್ದಾಗಿತ್ತು. ಆದರೆ, ಸಹ-ಪೈಲಟ್ ದಾಳಿ ನಡೆಸಿದ ಬಳಿಕ ಅನಿರೀಕ್ಷಿತವಾಗಿ ವಿಮಾನದ ನಿಯಂತ್ರಣವನ್ನು ವಹಿಸಿಕೊಳ್ಳಬೇಕಾಯಿತು.
►30 ಸೆಕೆಂಡುಗಳಲ್ಲಿ 16 ಸಾವಿರ ಅಡಿ ಕುಸಿತ
'ದಿ ಟೈಮ್ಸ್ ಆಫ್ ಇಸ್ರೇಲ್' ವರದಿಯ ಪ್ರಕಾರ, ಕ್ಯಾಪ್ಟನ್ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ವಿಮಾನ ಕೇವಲ 30 ಸೆಕೆಂಡುಗಳಲ್ಲಿ ಸುಮಾರು 16,000 ಅಡಿಗಳಷ್ಟು ಕೆಳಕ್ಕೆ ಇಳಿದಿತ್ತು. ಈ ಘಟನೆಯಿಂದ ವಿಮಾನದ ದಿಕ್ಕು ಬದಲಾಯಿಸಲು ನೆರವಾಗುವ 'ರಡ್ಡರ್' ಭಾಗವೂ ಹಾನಿಗೊಳಗಾಗಿತ್ತು.
ಈ ಗಂಭೀರ ಪರಿಸ್ಥಿತಿಯಲ್ಲಿ ಕಾಕ್ ಪಿಟ್ ಪ್ರವೇಶಿಸಿದ ಸ್ಟೀವನ್ ಮತ್ತು ಟೂತ್ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡರು. ಬಳಿಕ ಹಾನಿಗೊಳಗಾದ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ ಬಳಿಕ ಅವರನ್ನು ಟೆಲ್ ಅವೀವ್ ಗೆ ಕರೆದೊಯ್ಯಲು ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು.
►ಯುಎಇ ಅಧ್ಯಕ್ಷರಿಂದ ಗೌರವ ಪ್ರದಾನ
'ಫ್ಲೈದುಬೈ' ಸಿಬ್ಬಂದಿಯ ಸಾಹಸ ಮತ್ತು ವೃತ್ತಿಪರತೆಯನ್ನು ಗುರುತಿಸಿ ಯುಎಇ ಅಧ್ಯಕ್ಷ ಶೇಖ್ ಮೊಹಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಈ ಗೌರವವನ್ನು ಘೋಷಿಸಿದ್ದರು. ಅಕ್ಟೋಬರ್ 27ರಂದು ನಡೆದ ಸಮಾರಂಭದಲ್ಲಿ ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಪೈಲಟ್ ಗಳಿಗೆ ಪದಕಗಳನ್ನು ಪ್ರದಾನ ಮಾಡಿದರು.
ಸೌಜನ್ಯ: NDTV






