ಸಿಯುಟಾಕ್ಕೆ ಮೊರಾಕ್ಕೊದಿಂದ ಭಾರಿ ವಲಸೆ: 60 ಸಾವಿರ ಮಂದಿ ಪ್ರವೇಶ; ಸ್ಪೇನ್ ನಲ್ಲಿ ಭದ್ರತೆ ಬಿಗಿ

Photo Credit : Reuters Photos
ಮ್ಯಾಡ್ರಿಡ್: ಉತ್ತರ ಆಫ್ರಿಕಾದಲ್ಲಿರುವ ಸ್ಪೇನ್ ನ ಸ್ವಾಯತ್ತ ಪ್ರದೇಶ ಸಿಯುಟಾಕ್ಕೆ (Ceuta) ಮೊರಾಕ್ಕೊದಿಂದ ಭಾರಿ ಪ್ರಮಾಣದಲ್ಲಿ ವಲಸಿಗರು ಪ್ರವೇಶಿಸಿದ್ದು, ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಸ್ಪ್ಯಾನಿಷ್ ಅಧಿಕಾರಿಗಳು ಭದ್ರತೆಯನ್ನು ಬಿಗಿಗೊಳಿಸಿದ್ದು, ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಶುಕ್ರವಾರ ಸಿಯುಟಾಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.
ಮೆಡಿಟರೇನಿಯನ್ ಕರಾವಳಿಯಲ್ಲಿರುವ ಸಿಯುಟಾದ ಗಡಿ ಪ್ರದೇಶದಿಂದ ಬಿಡುಗಡೆಯಾಗಿರುವ ವೀಡಿಯೋಗಳು ಹಾಗೂ ಚಿತ್ರಗಳಲ್ಲಿ, ಮೊರಾಕ್ಕೊ ಗಡಿ ತಪಾಸಣಾ ಕೇಂದ್ರದ ಸಮೀಪದ ಕಡಲತೀರದಲ್ಲಿ ಸಾವಿರಾರು ಮಂದಿ ಸೇರಿರುವುದು ಕಂಡುಬಂದಿದೆ. ಅನೇಕರು ಗಡಿ ತಡೆಗೋಡೆಯನ್ನು ದಾಟಲು ಯತ್ನಿಸಿದ್ದು, ಕೆಲವರು ಸಮುದ್ರದ ಮೂಲಕ ಈಜುತ್ತಲೇ ಸ್ಪ್ಯಾನಿಷ್ ಪ್ರದೇಶ ಪ್ರವೇಶಿಸಿದ್ದಾರೆ.
ಈ ಭಾರಿ ಪ್ರಮಾಣದ ವಲಸೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಈ ಬೆಳವಣಿಗೆ ಸ್ಪೇನ್ ಗೆ ರಾಜತಾಂತ್ರಿಕ ಮತ್ತು ಭದ್ರತಾ ಸವಾಲಾಗಿ ಪರಿಣಮಿಸಿದೆ.
"ಮೊರಾಕ್ಕೊದಿಂದ ಸಿಯುಟಾಕ್ಕೆ ಸಾವಿರಾರು ಮಂದಿ ಸಾಮೂಹಿಕವಾಗಿ ಪ್ರವೇಶಿಸಿರುವುದು ಸ್ಪೇನ್ ನ ಪ್ರಾದೇಶಿಕ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ" ಎಂದು ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ.
ಸಿಯುಟಾದ ಅಧ್ಯಕ್ಷ ಜುವಾನ್ ಜೀಸಸ್ ವಿವಾಸ್ ಅವರ ಪ್ರಕಾರ, ಸುಮಾರು 60,000 ಮಂದಿ ನಗರ ಪ್ರವೇಶಿಸಿದ್ದು, ಇದು ನಗರದ ಸಾಮಾನ್ಯ ಜನಸಂಖ್ಯೆಯ ಸುಮಾರು 70 ಪ್ರತಿಶತಕ್ಕೆ ಸಮನಾಗಿದೆ. ಸಿಯುಟಾ ಎದುರಿಸುತ್ತಿರುವ ಪರಿಸ್ಥಿತಿ ಸಂಪೂರ್ಣವಾಗಿ ಅಸಹನೀಯವಾಗಿದೆ ಎಂದು ಅವರು ಹೇಳಿದ್ದಾರೆ.
ಎಎಫ್ಪಿ ವರದಿಯ ಪ್ರಕಾರ, ಸಾವಿರಾರು ಮಂದಿ ಗಡಿ ದಾಟಿದ್ದು, ಹಲವರು ಮೆಡಿಟರೇನಿಯನ್ ಸಮುದ್ರ ಸೇರುವ ಗಡಿ ತಡೆಗೋಡೆಯ ಸುತ್ತ ಈಜುತ್ತಲೇ ಸಿಯುಟಾ ಪ್ರವೇಶಿಸಿದ್ದಾರೆ. ಸ್ಪ್ಯಾನಿಷ್ ಪ್ರದೇಶ ತಲುಪುವ ಯತ್ನದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿರುವುದಾಗಿ ಹಲವು ವರದಿಗಳು ತಿಳಿಸಿವೆ.
►ಸಿಯುಟಾ ಎಂದರೇನು?
ಸಿಯುಟಾ ಮತ್ತು ಮೆಲಿಲ್ಲಾ ಉತ್ತರ ಆಫ್ರಿಕಾದಲ್ಲಿರುವ ಸ್ಪೇನ್ ನ ಎರಡು ಸ್ವಾಯತ್ತ ನಗರಗಳಾಗಿದ್ದು, ಯುರೋಪ್ ಮತ್ತು ಆಫ್ರಿಕಾ ನಡುವಿನ ಏಕೈಕ ಭೂ ಗಡಿಗಳಾಗಿವೆ.
1580ರಿಂದ ಸಿಯುಟಾ ಸ್ಪೇನ್ ನ ಆಡಳಿತದಲ್ಲಿದೆ. ಆದರೆ, ಮೊರಾಕ್ಕೊ ಸಿಯುಟಾ ಮತ್ತು ಮೆಲಿಲ್ಲಾವನ್ನು ಸ್ಪೇನ್ ನ ಭಾಗವೆಂದು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಅವುಗಳನ್ನು ತನ್ನ ಆಕ್ರಮಿತ ಪ್ರದೇಶಗಳೆಂದು ಪರಿಗಣಿಸುತ್ತದೆ.
►2021ರಲ್ಲೂ ಇದೇ ರೀತಿಯ ಬಿಕ್ಕಟ್ಟು
2021ರಲ್ಲಿ ಮೊರಾಕ್ಕೊ ಗಡಿ ನಿಯಂತ್ರಣವನ್ನು ಸಡಿಲಗೊಳಿಸಿದ ಪರಿಣಾಮ 10,000ಕ್ಕೂ ಹೆಚ್ಚು ವಲಸಿಗರು ಸಿಯುಟಾಗೆ ಪ್ರವೇಶಿಸಿದ್ದರು. ಆಗ ಸ್ಪೇನ್ ಮತ್ತು ಮೊರಾಕ್ಕೊ ನಡುವಿನ ಸಂಬಂಧದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿತ್ತು.
ವಿವಾದಿತ ಪಶ್ಚಿಮ ಸಹಾರಾ ಪ್ರದೇಶದ ಸ್ವಾತಂತ್ರ್ಯ ಪರ ನಾಯಕನಿಗೆ ಸ್ಪೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಿದ್ದಕ್ಕೆ ಪ್ರತಿಯಾಗಿ ಮೊರಾಕ್ಕೊ ಗಡಿ ನಿಯಂತ್ರಣವನ್ನು ಸಡಿಲಗೊಳಿಸಿತ್ತು ಎಂಬ ಅಭಿಪ್ರಾಯ ಆಗ ವ್ಯಾಪಕವಾಗಿ ವ್ಯಕ್ತವಾಗಿತ್ತು.
►ವಿಶ್ವ ನಾಯಕರ ಪ್ರತಿಕ್ರಿಯೆ
ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಮೊರಾಕ್ಕೊ ಅಕ್ರಮ ವಲಸಿಗರನ್ನು ತಕ್ಷಣ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಕಚೇರಿ, ಸ್ಪ್ಯಾನಿಷ್ ಮತ್ತು ಮೊರೊಕನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿದ್ದರೆ ಫ್ರಾಂಟೆಕ್ಸ್ (ಯುರೋಪಿಯನ್ ಗಡಿ ಮತ್ತು ಕರಾವಳಿ ಕಾವಲು ಸಂಸ್ಥೆ) ಮೂಲಕ ಸ್ಪೇನ್ಗೆ ನೆರವು ನೀಡಲು ಸಿದ್ಧವಿದೆ ಎಂದು ತಿಳಿಸಿದೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಗಡಿಗಳು ಮತ್ತು ನಾಗರಿಕರ ಸುರಕ್ಷತೆ ಕಾಪಾಡಲು ಅಗತ್ಯವಿದ್ದರೆ ಸ್ಪೇನ್ ಗೆ ಅಸಾಧಾರಣ ಕ್ರಮಗಳ ಮೂಲಕವೂ ಬೆಂಬಲ ನೀಡುವುದಾಗಿ ಹೇಳಿದ್ದಾರೆ.






