ಮುಸ್ಲಿಂ ವಿರೋಧಿ ಪ್ರತಿಭಟನೆ ಸಂದರ್ಭ ನ್ಯೂಯಾರ್ಕ್ ಮೇಯರ್ ಮಮ್ದಾನಿ ನಿವಾಸದ ಹೊರಗೆ ಸ್ಫೋಟಕಗಳ ಎಸೆತ

ಜೊಹ್ರಾನ್ ಮಮದಾನಿ | Photo Credit : AP , PTI
ನ್ಯೂಯಾರ್ಕ್: ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅವರ ಅಧಿಕೃತ ನಿವಾಸದ ಹೊರಗೆ ಮುಸ್ಲಿಂ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಎಸೆಯಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಪೋಲಿಸರು ಬಂಧಿಸಿದ್ದಾರೆ.
ಬಲಪಂಥೀಯ ಕಾರ್ಯಕರ್ತ ಜೇಕ್ ಲ್ಯಾಂಗ್ ಆಯೋಜಿಸಿದ್ದ ಪ್ರತಿಭಟನೆಯು ಶನಿವಾರ ಬೆಳಿಗ್ಗೆ ಅಪ್ಪರ್ ಈಸ್ಟ್ ಸೈಡ್ನ ಗ್ರೇಸಿ ಮ್ಯಾನ್ಷನ್ನಲ್ಲಿರುವ ಮೇಯರ್ ನಿವಾಸದ ಬಳಿ ನಡೆದಿತ್ತು. ಮುಸ್ಲಿಂ ವಿರೋಧಿ ಪ್ರತಿಭಟನೆಯಲ್ಲಿ ಸುಮಾರು 20 ಜನರು ಪಾಲ್ಗೊಂಡಿದ್ದರೆ, ಪ್ರತಿಭಟನೆಯನ್ನು ವಿರೋಧಿಸಿ ಸುಮಾರು 125 ಜನರು ಸಮೀಪದಲ್ಲಿ ಜಮಾವಣೆಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಪ್ರತಿಭಟನಾಕಾರರ ನಡುವೆ ಘರ್ಷಣೆಯ ಸಂದರ್ಭದಲ್ಲಿ ಇಬ್ಬರು ಶಂಕಿತ ಆರೋಪಿಗಳು ಕಚ್ಚಾ ಸ್ಫೋಟಕ ಸಾಧನಗಳನ್ನು ಹೊತ್ತಿಸಿ ಎಸೆದಿದ್ದರು ಎಂದು ನ್ಯೂಯಾರ್ಕ್ ನಗರದ ಪೋಲಿಸ್ ಆಯುಕ್ತ ಜೆಸ್ಸಿಕಾ ಟಿಷ್ಚ್ ತಿಳಿಸಿದರು.
ಲ್ಯಾಂಗ್ ಗುಂಪಿನ ವ್ಯಕ್ತಿಯೋರ್ವ ಪ್ರತಿಭಟನೆ ವಿರೋಧಿಗಳತ್ತ ಪೆಪ್ಪರ್ ಸ್ಪ್ರೇ ಸಿಂಪಡಿಸಿದಾಗ ಉದ್ವಿಗ್ನತೆ ಉಲ್ಬಣಗೊಂಡಿತ್ತು. ಆತನನ್ನು ನಂತರ ಬಂಧಿಸಲಾಗಿದೆ ಎಂದು ಟಿಷ್ಚ್ ತಿಳಿಸಿದರು.
ಇದರ ಬೆನ್ನಲ್ಲೆ 18ರ ಹರೆಯದ ಪ್ರತಿಭಟನಾಕಾರನೋರ್ವ ಸ್ಫೋಟಕ ಸಾಧನವನ್ನು ಹೊತ್ತಿಸಿ ಪ್ರತಿಭಟನಾ ತಾಣದತ್ತ ಎಸೆದಿದ್ದ. ಆಮಿರ್ ಬಾಲಾತ್ ಎಂಬ ಆ ಯುವಕ ನಂತರ ಅಲ್ಲಿಂದ ಒಡಿ ಹೋಗಿ 19ರ ಹರೆಯದ ಇಬ್ರಾಹಿಂ ನಿಕ್ ಎಂಬಾತನಿಂದ ಇನ್ನೊಂದು ಸ್ಫೋಟಕವನ್ನು ಪಡೆದುಕೊಂಡು ಮಮ್ದಾನಿ ನಿವಾಸದತ್ತ ಎಸೆದಿದ್ದ. ಪೋಲಿಸರು ಇಬ್ಬರನ್ನೂ ಬಂಧಿಸಿದ್ದಾರೆ.
ಘಟನೆ ನಡೆದಾಗ ಮಮ್ದಾನಿ ಅಥವಾ ಅವರ ಪತ್ನಿ ರಮಾ ದುವಾಜಿ ತಮ್ಮ ನಿವಾಸದಲ್ಲಿ ಇರಲಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.
ನ್ಯೂಯಾರ್ಕ್ ಪೋಲಿಸ್ ಇಲಾಖೆಯು ಎಫ್ಬಿಐನ ಜಂಟಿ ಭಯೋತ್ಪಾದನಾ ಕಾರ್ಯಪಡೆಯ ಸಮನ್ವಯದೊಂದಿಗೆ ಘಟನೆಯ ಕುರಿತು ತನಿಖೆಯನ್ನು ನಡೆಸುತ್ತಿದೆ.
ಪ್ರತಿಭಟನೆಯನ್ನು ಖಂಡಿಸಿದ ಮಮ್ದಾನಿಯವರ ವಕ್ತಾರ ಜೋ ಕಾಲ್ವೆಲೋ ಅವರು, ಪ್ರತಿಭಟನೆಯು ಹೇಯ ಮತ್ತು ಇಸ್ಲಾಮೊಫೋಬಿಕ್ ಆಗಿತ್ತು ಎಂದು ಹೇಳಿದರು. ಲ್ಯಾಂಗ್ ಕೆಟ್ಟ ಶ್ವೇತವರ್ಣೀಯ ಪ್ರಾಬಲ್ಯವಾದಿಯಾಗಿದ್ದಾರೆ ಎಂದು ಅವರು ಟೀಕಿಸಿದರು.
ಲ್ಯಾಂಗ್ ಅವರು ಈ ಹಿಂದೆ ನಡೆಸಿದ್ದ ಪ್ರತಿಭಟನೆಯ ಕುರಿತು ವಿವಾದಗಳ ನಡುವೆಯೇ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆಗೆ ಸಂಬಂಧಿಸಿದಂತೆ ಶ್ರದ್ಧಾಂಜಲಿ ಸಭೆಯ ಸಂದರ್ಭದಲ್ಲಿ ಲ್ಯಾಂಗ್ ಅವರ ಪ್ರತಿಭಟನೆ ವೇಳೆ ಮೇಕೆಯೊಂದನ್ನು ಪ್ರದರ್ಶಿಸಲಾಗಿತ್ತು ಮತ್ತು ಆಕ್ಷೇಪಾರ್ಹ ಸನ್ನೆಗಳನ್ನು ಮಾಡಲಾಗಿತ್ತು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು.
ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದೆ ಎಂದು ಪೋಲಿಸರು ತಿಳಿಸಿದ್ದಾರೆ.







