ಪುಟಿನ್ ಜೊತೆ ಮುಖಾಮುಖಿ ಭೇಟಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪ್ರಸ್ತಾಪ

ವೊಲೊದಿಮಿರ್ ಝೆಲೆನ್ಸ್ಕಿ , ವ್ಲಾದಿಮಿರ್ ಪುಟಿನ್ | Photo Credit : PTI
ಕೀವ್: ಉಕ್ರೇನ್ ವಿರುದ್ಧ ರಶ್ಯಾದ ವೈಮಾನಿಕ ದಾಳಿ ತೀವ್ರಗೊಳ್ಳುತ್ತಿರುವಂತೆಯೇ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮುಖಾಮುಖಿ ಭೇಟಿ ಹಾಗೂ ಶಾಂತಿ ಮಾತುಕತೆಯ ಸಂದರ್ಭ ಪೂರ್ಣ ಪ್ರಮಾಣದ ಯುದ್ಧವಿರಾಮದ ಪ್ರಸ್ತಾಪವನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮುಂದಿರಿಸಿದ್ದಾರೆ.
ನಮ್ಮಿಬ್ಬರ ನಡುವಿನ ನೇರ ಮಾತುಕತೆಯ ಮೂಲಕ ಈ ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್ ಪ್ರಸ್ತಾಪಿಸುತ್ತದೆ. ನಾನು ಸಭೆಯನ್ನು ಪ್ರಸ್ತಾಪಿಸುತ್ತಿದ್ದೇನೆ' ಎಂದು ಉಕ್ರೇನ್ ಅಧ್ಯಕ್ಷರ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಬಹಿರಂಗ ಪತ್ರದಲ್ಲಿ ಝೆಲೆನ್ಸ್ಕಿ ಉಲ್ಲೇಖಿಸಿದ್ದಾರೆ. ಜೊತೆಗೆ, ವಿಶಾಲ ಶಾಂತಿ ಒಪ್ಪಂದದ ಸಂಭಾವ್ಯ ಪ್ರಥಮ ಹಂತವಾಗಿ ಎಲ್ಲಾ ಯುದ್ಧ ಕೈದಿಗಳನ್ನೂ ವಿನಿಮಯ ಮಾಡಿಕೊಳ್ಳುವ ಸಲಹೆಯನ್ನೂ ಝೆಲೆನ್ಸ್ಕಿ ಮುಂದಿರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ `ಝೆಲೆನ್ಸ್ಕಿ ಯಾವುದೇ ಸಮಯದಲ್ಲೂ ಮಾಸ್ಕೋಗೆ ಬರಬಹುದು. ಅವರನ್ನು ನಾವು ಸ್ವಾಗತಿಸುತ್ತೇವೆ' ಎಂದು ಹೇಳಿರುವುದಾಗಿ ವರದಿಯಾಗಿದೆ.




