ಭಾರತದ ಮೇಲಿನ ಸುಂಕವನ್ನು ಟೀಕಿಸಿದ ಬೆನ್ನಿಗೇ ಟ್ರಂಪ್ ರ ಮಾಜಿ ಸಲಹೆಗಾರ ಜಾನ್ ಬೋಲ್ಟನ್ ನಿವಾಸದ ಮೇಲೆ ಎಫ್ಬಿಐ ದಾಳಿ

ಡೊನಾಲ್ಡ್ ಟ್ರಂಪ್ - ಜಾನ್ ಬೋಲ್ಟನ್
ವಾಶಿಂಗ್ಟನ್: ಒಂದು ಕಾಲದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಕಟ್ಟಾ ಬೆಂಬಲಿಗರಾಗಿದ್ದ ಹಾಗೂ ಈಗ ಅವರ ಬದ್ಧ ಟೀಕಾಕಾರರಾಗಿರುವ ಅವರ ಮಾಜಿ ಸಲಹೆಗಾರ ಜಾನ್ ಬೋಲ್ಟನ್ ನಿವಾಸದ ಮೇಲೆ ಎಫ್ಬಿಐ ದಾಳಿ ನಡೆಸಿದೆ. ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕವನ್ನು ಅವರು ಟೀಕಿಸಿದ ಬೆನ್ನಿಗೇ ಈ ದಾಳಿ ನಡೆದಿದೆ.
ವರ್ಗೀಕೃತ ದಾಖಲೆಗಳ ಕುರಿತು ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು AP ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ಡೊನಾಲ್ಡ್ ಟ್ರಂಪ್ ರ ಮಾಜಿ ನಿಕಟವರ್ತಿಯಾದ ಜಾನ್ ಬೋಲ್ಟನ್ ರಿಂದ ಈವರೆಗೆ ಈ ಕುರಿತು ಯಾವುದೇ ಪ್ರತಿಕ್ರಿಯೆ ಹೊರ ಬಿದ್ದಿಲ್ಲ ಹಾಗೂ ಅವರ ವಿರುದ್ಧ ಯಾವುದೇ ಪ್ರಕರಣವನ್ನೂ ದಾಖಲಿಸಲಾಗಿಲ್ಲ.
ಡೊನಾಲ್ಡ್ ಟ್ರಂಪ್ ಆಡಳಿತದಿಂದ ಈವರೆಗೆ ಯಾವುದೇ ಸ್ಪಷ್ಟೀಕರಣ ಹೊರಬೀಳದಿದ್ದರೂ, “ಕಾನೂನಿನಿಗಿಂತ ಯಾರೂ ದೊಡ್ಡವರಲ್ಲ. ಎಫ್ಬಿಐ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಜಾನ್ ಬೋಲ್ಟನ್ ನಿವಾಸದ ಮೇಲೆ ದಾಳಿ ಪ್ರಾರಂಭಗೊಂಡ ಬೆನ್ನಿಗೇ, ಎಫ್ಬಿಐ ನಿರ್ದೇಶಕ ಕಶ್ ಪಟೇಲ್ ಟ್ವೀಟ್ ಮಾಡಿದ್ದಾರೆ.





