ಹೌತಿಗಳಿಂದ ದಾಳಿಯ ಆತಂಕ | ರಿಯಾದ್ಗೆ ಏರ್ ಇಂಡಿಯಾ ಎಕ್ಸ್ಪ್ರೆಸ್, ಅಕಾಸಾ ಏರ್ ವಿಮಾನಗಳ ಹಾರಾಟ ರದ್ದು

ಏರ್ ಇಂಡಿಯಾ ಎಕ್ಸ್ಪ್ರೆಸ್, ಅಕಾಸಾ ಏರ್ ವಿಮಾನ | Photo Credit : PTI
ಹೊಸದಿಲ್ಲಿ: ರಿಯಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಪೋಟಗಳು ಸಂಭವಿಸಿದ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಮತ್ತು ಅಕಾಸಾ ಏರ್ ಸಂಸ್ಥೆಗಳು ರಿಯಾದ್ಗೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿವೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಅಕ್ಟೋಬರ್ 10ರವರೆಗೆ ರಿಯಾದ್ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ. ಈ ರದ್ದತಿಯಿಂದ ಸಂಕಷ್ಟಕ್ಕೊಳಗಾದ ಪ್ರಯಾಣಿಕರಿಗೆ ಉಚಿತವಾಗಿ ವಿಮಾನ ವೇಳಾಪಟ್ಟಿ ಬದಲಾಯಿಸಲು ಅವಕಾಶ ನೀಡಲಾಗುವುದು ಅಥವಾ ಬುಕಿಂಗ್ ರದ್ದುಗೊಳಿಸಲು ಬಯಸಿದರೆ ಪೂರ್ಣ ಹಣವನ್ನು ಹಿಂತಿರುಗಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಅಕಾಸಾ ಏರ್ ಸಂಸ್ಥೆಯು ಸಹ ಅಕ್ಟೋಬರ್ 8ಕ್ಕೆ ನಿಗದಿಯಾಗಿದ್ದ ತನ್ನ ಕೊಚ್ಚಿ-ರಿಯಾದ್ ಮತ್ತು ರಿಯಾದ್-ಕೊಚ್ಚಿ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ. ವಿಮಾನ ರದ್ದತಿಯಿಂದ ಬಾಧಿತರಾದ ಪ್ರಯಾಣಿಕರು ಪೂರ್ಣ ಹಣವನ್ನು ವಾಪಸ್ ಪಡೆಯಬಹುದು ಅಥವಾ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಮ್ಮ ಪ್ರಯಾಣದ ದಿನಾಂಕವನ್ನು ಮರುಹೊಂದಿಸಬಹುದು. ಮುಂದಿನ ಬದಲಾವಣೆಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.




