ಫಿಫಾ ವಿಶ್ವಕಪ್: ಇರಾನ್ ಸ್ಥಾನಕ್ಕೆ ಇಟಲಿಯನ್ನು ತರಲು ಅಮೆರಿಕ ಅಧ್ಯಕ್ಷ ಟ್ರಂಪ್ರ ಹಿರಿಯ ಪ್ರತಿನಿಧಿ ಮನವಿ

ಡೊನಾಲ್ಡ್ ಟ್ರಂಪ್ | Photo Credit : PTI
ಹೊಸದಿಲ್ಲಿ ಮುಂಬರುವ ಫುಟ್ಬಾಲ್ ವಿಶ್ವಕಪ್ನಲ್ಲಿ ಇರಾನ್ ಸ್ಥಾನಕ್ಕೆ ಇಟಲಿಯನ್ನು ತರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಹಿರಿಯ ಪ್ರತಿನಿಧಿಯೊಬ್ಬರು ಕ್ರೀಡೆಯ ಆಡಳಿತ ಮಂಡಳಿ ಫಿಫಾಗೆ ಮನವಿ ಮಾಡಿದ್ದಾರೆ ಎಂದು ‘ಫೈನಾನ್ಶಿಯಲ್ ಟೈಮ್ಸ್’ ಬುಧವಾರ ವರದಿ ಮಾಡಿದೆ.
ಇದು ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ನಡುವಿನ ಹಳಸಿದ ಸಂಬಂಧವನ್ನು ಸುಧಾರಿಸುವ ಒಂದು ಪ್ರಯತ್ನವಾಗಿದೆ ಎನ್ನಲಾಗಿದೆ. ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿ ಪೋಪ್ 14ನೇ ಲಿಯೊ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಜಿಯೋರ್ಜಿಯಾ ಮೆಲೋನಿ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
‘‘ವಿಶ್ವಕಪ್ನಲ್ಲಿ ಇರಾನ್ ಸ್ಥಾನಕ್ಕೆ ಇಟಲಿಯನ್ನು ತರುವಂತೆ ನಾನು ಟ್ರಂಪ್ ಮತ್ತು ಫಿಫಾ ಅಧ್ಯಕ್ಷ ಜಿಯಾನಿ ಇನ್ಫ್ಯಾಂಟಿನೊ ಅವರಿಗೆ ಸಲಹೆ ನೀಡಿದ್ದೇನೆ. ನಾನು ಇಟಲಿ ಮೂಲದವನು. ಹಾಗಾಗಿ, ಅಮೆರಿಕ ಆತಿಥ್ಯ ವಹಿಸುವ ಪಂದ್ಯಾವಳಿಯಲ್ಲಿ ಇಟಲಿಯನ್ನು ನೋಡುವುದು ನನ್ನ ಕನಸಾಗಿದೆ. ಇಟಲಿಯು ಈವರೆಗೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿರುವುದರಿಂದ ಈ ಪಂದ್ಯಾವಳಿಯಲ್ಲಿ ಅದರ ಸೇರ್ಪಡೆಗೆ ಸಮರ್ಥನೆ ಇದೆ’’ ಎಂದು ಫಿಫಾಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ಪವೋಲೊ ಝಂಪೋಲಿ ಹೇಳಿದ್ದಾರೆ.
ಇಟಲಿ ಸತತ ಮೂರನೇ ಬಾರಿಗೆ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಆದರೆ, ಪಂದ್ಯಾವಳಿಯಲ್ಲಿ ಭಾಗವಹಿಸಲು ತಾನು ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಇರಾನ್ ಹೇಳಿಕೆಯೊಂದರಲ್ಲಿ ಬುಧವಾರ ತಿಳಿಸಿದೆ ಎನ್ನಲಾಗಿದೆ. ತನ್ನ ಪಂದ್ಯಗಳನ್ನು ಅಮೆರಿಕದಿಂದ ಮೆಕ್ಸಿಕೊಗೆ ವರ್ಗಾಯಿಸಬೇಕು ಎಂಬ ಮನವಿಗೆ ಫಿಫಾದಿಂದ ಉತ್ತರ ಬಂದ ಬಳಿಕ ಭಾಗವಹಿಸುವ ಬಗ್ಗೆ ನಿರ್ಧರಿಸುವುದಾಗಿ ಇರಾನ್ ಈ ಹಿಂದೆ ಹೇಳಿತ್ತು.






