ಇಸ್ರೇಲ್ ನ ಅರಾದ್ ನಗರದ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ | ವ್ಯಾಪಕ ಹಾನಿ; 150 ಕುಟುಂಬಗಳ ಸ್ಥಳಾಂತರ

Photo Credit : X
ಆರಾದ್ (ಇಸ್ರೇಲ್), ಮಾ. 22: ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದ ದಕ್ಷಿಣ ಇಸ್ರೇಲ್ ನ ಅರಾದ್ ನಗರದಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ವಸತಿ ಕಟ್ಟಡಗಳ ನಡುವಿನ ನಗರ ಕೇಂದ್ರದಲ್ಲೇ ಕ್ಷಿಪಣಿ ನೇರವಾಗಿ ಬಿದ್ದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಇಸ್ರೇಲ್ ಅಗ್ನಿಶಾಮಕ ದಳ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
“ಅರಾದ್ ನಗರದಲ್ಲಿ ಸಂಭವಿಸಿದ ದಾಳಿ ವಸತಿ ಪ್ರದೇಶದ ಮಧ್ಯಭಾಗದಲ್ಲೇ ನಡೆದಿದ್ದು, ಇದು ಡೆರೆಕ್ಟ್ ಹಿಟ್. ಘಟನಾ ಸ್ಥಳದಲ್ಲಿ ವ್ಯಾಪಕ ಹಾನಿ ಉಂಟಾಗಿದೆ,” ಎಂದು ಅಗ್ನಿಶಾಮಕ ದಳ ಹೇಳಿಕೆಯಲ್ಲಿ ತಿಳಿಸಿದೆ.
ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಂದ ಸುಮಾರು 150 ಕುಟುಂಬಗಳನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ ಎಂದು ಅರಾದ್ ನಗರದ ಮೇಯರ್ ತಿಳಿಸಿದ್ದಾರೆ.
ಇಸ್ರೇಲ್ ತುರ್ತು ಸೇವೆಗಳ ಪ್ರಕಾರ, ದಾಳಿಯಲ್ಲಿ ಕನಿಷ್ಠ 64 ಮಂದಿ ಗಾಯಗೊಂಡಿದ್ದಾರೆ. ನಂತರದ ವರದಿಗಳಲ್ಲಿ ಗಾಯಾಳುಗಳ ಸಂಖ್ಯೆ 70ಕ್ಕೂ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅರಾದ್ ನಲ್ಲಿರುವ ಆಸ್ಪತ್ರೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಇಸ್ರೇಲಿನ ಮಾಧ್ಯಮ Times of Israel ವರದಿ ಮಾಡಿದೆ.
ತುರ್ತು ಸೇವಾ ಸಿಬ್ಬಂದಿ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







