ನೆತನ್ಯಾಹುಗೆ ಅಗ್ನಿಪರೀಕ್ಷೆ: ಹಮಾಸ್ ದಾಳಿಯ ಬಳಿಕ ಇಸ್ರೇಲ್ ನಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ

ಬೆಂಜಮಿನ್ ನೆತನ್ಯಾಹು (Photo: PTI)
ಜೆರುಸಲೆಮ್: ಇಸ್ರೇಲ್ ನ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಸಾರ್ವತ್ರಿಕ ಚುನಾವಣೆಗೆ ಮಂಗಳವಾರ ಮತದಾನ ಆರಂಭವಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಾಯಕತ್ವಕ್ಕೆ ಅಗ್ನಿಪರೀಕ್ಷೆಯಾಗಿರುವ ಈ ಚುನಾವಣೆಯಲ್ಲಿ, ಅವರ ‘ಲಿಕುಡ್’ ಪಕ್ಷ ಮತ್ತು ಬಲಪಂಥೀಯ ಮಿತ್ರಪಕ್ಷಗಳ ವಿರುದ್ಧ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್ಕೋಟ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಎದುರಿಸುತ್ತಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದೆ. ಸಂಸತ್ತಿನ (ನೆಸೆಟ್) 120 ಸದಸ್ಯರನ್ನು ಆಯ್ಕೆ ಮಾಡಲು ಸುಮಾರು 73 ಲಕ್ಷ ಮತದಾರರು ಅರ್ಹರಾಗಿದ್ದಾರೆ. ಇತ್ತೀಚಿನ ಅಭಿಪ್ರಾಯ ಸಂಗ್ರಹಗಳು ನೆತನ್ಯಾಹು ಮತ್ತು ಐಸೆನ್ಕೋಟ್ ನೇತೃತ್ವದ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಇರುವುದನ್ನು ಸೂಚಿಸಿವೆ.
ಇಸ್ರೇಲ್ನ ಅತಿ ದೀರ್ಘಕಾಲದ ಪ್ರಧಾನಿಯಾಗಿರುವ ನೆತನ್ಯಾಹು, ಸುಮಾರು 19 ವರ್ಷಗಳ ಅಧಿಕಾರದ ಬಳಿಕವೂ ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿದಿದ್ದಾರೆ. ಆದರೆ, ಹಮಾಸ್ ದಾಳಿಯ ಸಂದರ್ಭದಲ್ಲಿ ಸಂಭವಿಸಿದ ಭದ್ರತಾ ವೈಫಲ್ಯಗಳು, ಗಾಝಾದಲ್ಲಿನ ಯುದ್ಧ, ಇರಾನ್ ಜೊತೆಗಿನ ಸಂಘರ್ಷ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಹೆಚ್ಚುತ್ತಿರುವ ಪ್ರತ್ಯೇಕತೆಯ ಹಿನ್ನೆಲೆಯಲ್ಲಿ ಅವರ ನಾಯಕತ್ವದ ಬಗ್ಗೆ ಮತದಾರರು ತೀರ್ಪು ನೀಡಲಿದ್ದಾರೆ.
ಭದ್ರತೆ, ಭ್ರಷ್ಟಾಚಾರ ಪ್ರಮುಖ ವಿಷಯ
ಭದ್ರತಾ ವೈಫಲ್ಯಗಳಿಗೆ ರಾಜಕೀಯ ಹೊಣೆಗಾರಿಕೆ ನಿಗದಿಪಡಿಸುವುದು, ಭ್ರಷ್ಟಾಚಾರದ ಆರೋಪಗಳು, ಅತಿ ಸಂಪ್ರದಾಯವಾದಿ ಯಹೂದಿಗಳ ಸೇನಾ ಸೇವೆ ಕುರಿತ ವಿವಾದಗಳು ಮತ್ತು ಅರಬ್ ನೇತೃತ್ವದ ಪಕ್ಷಗಳನ್ನು ಅನರ್ಹಗೊಳಿಸುವ ಪ್ರಯತ್ನಗಳು ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಿಷಯಗಳಾಗಿವೆ.
ಐಸೆನ್ ಕೋಟ್ ನೇತೃತ್ವದ ಮೈತ್ರಿಕೂಟದಲ್ಲಿ ‘ಯಶಾರ್’ ಪಕ್ಷವೂ ಸೇರಿದೆ. ಭದ್ರತಾ ವಿಷಯಗಳಲ್ಲಿ ಕಠಿಣ ನಿಲುವಿಗೆ ಹೆಸರು ವಾಸಿಯಾಗಿರುವ ಐಸೆನ್ ಕೋಟ್ ಗೆ ಬಲಪಂಥೀಯ ಹಾಗೂ ಮಧ್ಯಮಮಾರ್ಗಿಗಳ ಗುಂಪುಗಳ ಬೆಂಬಲವಿದೆ. ಮತ್ತೊಂದೆಡೆ, ಇಸ್ರೇಲ್ ನಲ್ಲಿ ರಾಷ್ಟ್ರೀಯವಾದಿ ರಾಜಕೀಯದ ಪ್ರಭಾವ ಹೆಚ್ಚುತ್ತಿರುವುದು ನೆತನ್ಯಾಹು ಅವರ ಬಣಕ್ಕೆ ನೆರವಾಗಬಹುದು. ದೇಶದ ವಿಭಜಿತ ರಾಜಕೀಯ ವ್ಯವಸ್ಥೆಯು ಸರಕಾರ ರಚನೆಯ ಲೆಕ್ಕಾಚಾರದಲ್ಲಿ ಅವರ ಪರವಾಗಿ ಕೆಲಸ ಮಾಡುವ ಸಾಧ್ಯತೆಯೂ ಇದೆ.
ಫೆಲೆಸ್ತೀನಿಯನ್ನರಿಗೆ ಪ್ರಾತಿನಿಧ್ಯದ ಪ್ರಶ್ನೆ
ಗಾಝಾ ಮತ್ತು ಆಕ್ರಮಿತ ವೆಸ್ಟ್ ಬ್ಯಾಂಕ್ ನಲ್ಲಿರುವ ಲಕ್ಷಾಂತರ ಫೆಲೆಸ್ತೀನಿಯನ್ನರಿಗೆ ಈ ಚುನಾವಣೆಯಲ್ಲಿ ಮತದಾನದ ಅವಕಾಶವಿಲ್ಲ. ಇಸ್ರೇಲ್ ನ ಒಟ್ಟು ಜನಸಂಖ್ಯೆಯ ಸುಮಾರು ಐದನೇ ಒಂದು ಭಾಗದಷ್ಟಿರುವ ಫೆಲೆಸ್ತೀನಿನ ಮೂಲದ ಇಸ್ರೇಲಿ ನಾಗರಿಕರು, ತಮ್ಮ ವಿರುದ್ಧವೇ ವ್ಯವಸ್ಥೆ ರೂಪಿತವಾಗಿದೆ ಎಂದು ಭಾವಿಸುತ್ತಿದ್ದಾರೆ. ಹೀಗಾಗಿ ತಾತ್ವಿಕ ನಿಲುವಿಗೆ ಬದ್ಧರಾಗಬೇಕೇ ಅಥವಾ ಗೆಲುವಿನ ಸಾಧ್ಯತೆಯಿರುವ ಅಭ್ಯರ್ಥಿಗೆ ಕಾರ್ಯತಂತ್ರದ ಮತ ಚಲಾಯಿಸಬೇಕೇ ಎಂಬ ಗೊಂದಲದಲ್ಲಿದ್ದಾರೆ.
ಹೆಚ್ಚಿನ ಮತಗಟ್ಟೆಗಳು ಭಾರತೀಯ ಕಾಲಮಾನ ಪ್ರಕಾರ ಮರುದಿನ ಬೆಳಿಗ್ಗೆ 2.30ಕ್ಕೆ ಮುಚ್ಚಲಿವೆ. ಚುನಾವಣಾ ಫಲಿತಾಂಶವು ನೆತನ್ಯಾಹು ಅವರ ರಾಜಕೀಯ ಭವಿಷ್ಯದ ಜೊತೆಗೆ ಇಸ್ರೇಲ್ ನ ಮುಂದಿನ ಆಡಳಿತದ ದಿಕ್ಕನ್ನೂ ನಿರ್ಧರಿಸಲಿದೆ.






