ಮಧ್ಯಂತರ ಚುನಾವಣೆಯಲ್ಲಿ ಭಾರೀ ಸೋಲು | ಮತಯಂತ್ರಗಳತ್ತ ಬೊಟ್ಟು ಮಾಡಿ ಚುನಾವಣಾ ಫಲಿತಾಂಶ ಪ್ರಶ್ನಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

Photo Credit :PTI
ವಾಶಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ತನ್ನ ಭದ್ರಕೋಟೆಗಳಲ್ಲೂ ಭಾರಿ ಸೋಲು ಅನುಭವಿಸಿದ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿದ್ದಾರೆ. ಮತದಾರರಿಗಿಂತ ಮತಯಂತ್ರಗಳೇ ಫಲಿತಾಂಶ ನಿರ್ಧರಿಸುವಲ್ಲಿ ಹೆಚ್ಚು ಪ್ರಭಾವ ಬೀರಿವೆ ಎಂದು ಅವರು ಆರೋಪಿಸಿದ್ದಾರೆ.
ಟೆಕ್ಸಾಸ್ ಮತ್ತು ದಕ್ಷಿಣ ಕೆರೊಲಿನಾದಂತಹ ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳೂ ಸೇರಿದಂತೆ ಅಮರಿಕದಾದ್ಯಂತ ಪಕ್ಷವು ಹಿನ್ನಡೆ ಅನುಭವಿಸಿದೆ. ಈ ಸೋಲಿಗೆ ಮತಪತ್ರದಲ್ಲಿ ತಮ್ಮ ಹೆಸರು ಇಲ್ಲದಿರುವುದು, ಇರಾನ್ ಯುದ್ಧ, ಇಂಧನ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳನ್ನು ಟ್ರಂಪ್ ಮುಂದಿಟ್ಟಿದ್ದಾರೆ.
ಫಲಿತಾಂಶಗಳು ಪ್ರಕಟವಾಗಲು ಆರಂಭವಾದ ಸಂದರ್ಭದಲ್ಲಿ 'ದಿ ನ್ಯೂಯಾರ್ಕ್ ಟೈಮ್ಸ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಮತಪತ್ರದಲ್ಲಿ ತಮ್ಮ ಹೆಸರು ಇಲ್ಲದ ಕಾರಣ ತಮ್ಮ ರ್ಯಾ ಲಿಗಳಲ್ಲಿ ಕಂಡುಬರುತ್ತಿದ್ದ ಉತ್ಸಾಹ ಮತ್ತು ಬೆಂಬಲವನ್ನು ಪಕ್ಷದ ಅಭ್ಯರ್ಥಿಗಳಿಗೆ ವರ್ಗಾಯಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಇದರಿಂದ ಮತದಾನದಲ್ಲಿ ಜನರ ಭಾಗವಹಿಸುವಿಕೆ ಕಡಿಮೆಯಾಯಿತು ಎಂಬ ವಾದವನ್ನು ಟ್ರಂಪ್ ಮುಂದಿಟ್ಟಿದ್ದಾರೆ.
ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಅಭ್ಯರ್ಥಿಗಳು ತಮ್ಮ ನಾಯಕತ್ವದ ಅಡಿಯಲ್ಲಿ ಪ್ರಚಾರ ನಡೆಸಲಿಲ್ಲ ಎಂದು ಆರೋಪಿಸಿದ್ದಾರೆ. ಇದೇ ವೇಳೆ 'ಫಾಕ್ಸ್ ನ್ಯೂಸ್' ಟಿವಿಯನ್ನೂ ಗುರಿಯಾಗಿಸಿಕೊಂಡಿದ್ದಾರೆ. ಟಿವಿಯು ನಿರಂತರವಾಗಿ ಡೆಮಾಕ್ರಟಿಕ್ ಪಕ್ಷದ ವಿಶ್ಲೇಷಕರಿಗೆ ಅವಕಾಶ ನೀಡುತ್ತಿದೆ ಎಂದು ದೂರಿದ್ದಾರೆ. ಅಲ್ಲಿ ಕಾಣಿಸಿಕೊಂಡ ಸಮೀಕ್ಷಾ ತಜ್ಞರನ್ನು 'ಭಯಾನಕ' ಎಂದು ಟೀಕಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ಹಿನ್ನಡೆಗೆ ಇರಾನ್ ಯುದ್ಧ ಮತ್ತು ಇಂಧನ ಬೆಲೆ ಏರಿಕೆಯೂ ಕಾರಣವಾಗಿರಬಹುದು ಎಂದು ಉಲ್ಲೇಖಿಸಿರುವ ಟ್ರಂಪ್, ಮತದಾನ ವ್ಯವಸ್ಥೆಯ ಮೇಲೂ ಆರೋಪ ಹೊರಿಸಿದ್ದಾರೆ.
►'ಮತದಾರರಿಗಿಂತ ಮತ ಯಂತ್ರಗಳೇ ಮುಖ್ಯ!'
ಚುನಾವಣೆ ನಡೆದು ಆರು ದಿನಗಳ ಬಳಿಕ ಸೋಮವಾರ 'ಟ್ರುತ್ ಸೋಶಿಯಲ್'ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಚುನಾವಣೆ ಪ್ರಾಮಾಣಿಕವಾಗಿ ನಡೆದಿದೆ ಎಂದು ಯಾರಾದರೂ ನಂಬುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳು ಇಷ್ಟೊಂದು ತಪ್ಪಾಗಲು ಹೇಗೆ ಸಾಧ್ಯ ಎಂದೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆರಂಭಿಕ ಹಂತದಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ ಎಷ್ಟೊಂದು ದೊಡ್ಡದಾಗಿತ್ತೆಂದರೆ, ಎಷ್ಟು ಜನರು ಮತದಾನಕ್ಕೆ ಬಂದರೂ ಗೆಲುವು ಸಾಧಿಸುವುದು ಅಸಾಧ್ಯವಾಗಿತ್ತು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. "ಇದೆಲ್ಲವೂ ಯಂತ್ರಗಳಿಗೆ ಸಂಬಂಧಿಸಿದ್ದು. ಮತದಾರರಿಗಿಂತ ಯಂತ್ರಗಳೇ ಹೆಚ್ಚು ಮುಖ್ಯ!" ಎಂದು ಆರೋಪಿಸಿದ್ದಾರೆ.
►2020ರ ಚುನಾವಣೆಯ ಆರೋಪಗಳೇ ಮತ್ತೆ ಮುನ್ನೆಲೆಗೆ
ಚುನಾವಣೆಯಲ್ಲಿ ಸೋಲು ಅನುಭವಿಸಿದಾಗ ಫಲಿತಾಂಶವನ್ನು ಪ್ರಶ್ನಿಸುವ ತಮ್ಮ ಹಳೆಯ ನಿಲುವನ್ನೇ ಟ್ರಂಪ್ ಮತ್ತೆ ಮುಂದುವರಿಸಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸೋತಾಗಲೂ ವ್ಯಾಪಕ ಮತದಾನ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳನ್ನು ಒದಗಿಸಿರಲಿಲ್ಲ.
ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ದಾಖಲಿಸಲಾಗಿದ್ದ ಡಝನ್ ಗಟ್ಟಲೆ ಮೊಕದ್ದಮೆಗಳು ವಿಫಲವಾಗಿದ್ದವು. ಈ ಆರೋಪಗಳ ಹಿನ್ನೆಲೆಯಲ್ಲಿ 2021ರ ಜನವರಿ 6ರಂದು ಶ್ವೇತಭವನದ ಹೊರಗೆ ನಡೆದ ರ್ಯಾ ಲಿಯಲ್ಲಿ ಟ್ರಂಪ್ ಭಾಷಣ ಮಾಡಿದ ಬಳಿಕ, ಅವರ ಬೆಂಬಲಿಗರ ಗುಂಪು ಅಮೆರಿಕದ ಸಂಸತ್ ಭವನವಾದ US ಕ್ಯಾಪಿಟಲ್ ಮೇಲೆ ದಾಳಿ ನಡೆಸಿತ್ತು.






