ನೇಪಾಳದಲ್ಲಿ ದಿಢೀರ್ ಪ್ರವಾಹ: 8 ಮಂದಿ ಮೃತ್ಯು, ಹಲವರು ನಾಪತ್ತೆ
► ಕೊಚ್ಚಿಹೋದ ಗ್ರಾಮಗಳು ►ಬಿಹಾರದಲ್ಲೂ ಮುನ್ನೆಚ್ಚರಿಕೆ

Photo credit: indiatoday.in
ಕಾಠ್ಮಂಡು: ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹಕ್ಕೆ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದ ಅಬ್ಬರಕ್ಕೆ ಹಲವು ಗ್ರಾಮಗಳು, ವಾಹನಗಳು ಮತ್ತು ಮೂಲಸೌಕರ್ಯ ನಿರ್ಮಾಣ ಯೋಜನೆಗಳು ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದ ನೀರು ನದಿಯ ಕೆಳಭಾಗಕ್ಕೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ನೇಪಾಳದ ಗಡಿಗೆ ಹೊಂದಿಕೊಂಡಿರುವ ಭಾರತದ ಬಿಹಾರ ರಾಜ್ಯದಲ್ಲೂ ಹೈಅಲರ್ಟ್ ಘೋಷಿಸಲಾಗಿದೆ.
ಬುಧವಾರ ಬೆಳಿಗ್ಗೆ 9 ಗಂಟೆಗೆ ಟಿಬೆಟ್ ಕಡೆಯಿಂದ ಭೋಟೆ ಕೋಶಿ ನದಿಗೆ ಅನಿರೀಕ್ಷಿತವಾಗಿ ಭಾರಿ ಪ್ರಮಾಣದ ನೀರು ಹರಿದು, ತಿಮುರೆ ಮತ್ತು ಶ್ಯಾಪ್ರು ಬೇಸಿ ಪ್ರದೇಶಗಳು ತೀವ್ರವಾಗಿ ಹಾನಿಗೊಳಗಾಗಿವೆ. ಅಧಿಕಾರಿಗಳು ಹಾನಿಯ ಪ್ರಮಾಣವನ್ನು ಪರಿಶೀಲಿಸುತ್ತಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಪ್ರವಾಹಕ್ಕೆ ನಿಖರ ಕಾರಣ ಅಸ್ಪಷ್ಟ
ಈ ದಿಢೀರ್ ಪ್ರವಾಹಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಸುವಾ ಜಿಲ್ಲೆಯಲ್ಲಿ ಭಾರಿ ಮಳೆಯಾದ ಯಾವುದೇ ವರದಿಯಿಲ್ಲ. ಆದರೆ, ಉಪಗ್ರಹ ಚಿತ್ರಗಳ ಪ್ರಕಾರ ಟಿಬೆಟ್ ಭಾಗದಲ್ಲಿ ಗಮನಾರ್ಹ ಪ್ರಮಾಣದ ಮಳೆಯಾಗಿದೆ ಎಂದು ನೇಪಾಳದ ಪ್ರವಾಹ ಮುನ್ಸೂಚನಾ ವಿಭಾಗ ತಿಳಿಸಿದೆ.
ಹಿಮನದಿಯ ಸರೋವರ ಒಡೆದು ಪ್ರವಾಹ ಉಂಟಾಗಿದೆಯೇ ಅಥವಾ ಟಿಬೆಟ್ ಕಡೆಯಿಂದ ಏಕಾಏಕಿ ನೀರು ಬಿಡುಗಡೆ ಮಾಡಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ʼದಿ ಕಾಠ್ಮಂಡುʼ ಪೋಸ್ಟ್ ವರದಿ ಮಾಡಿದೆ.
ಪ್ರವಾಹವು ನದಿಯ ಕೆಳಭಾಗದಲ್ಲಿರುವ ತ್ರಿಶೂಲಿ ಜಲಾನಯನ ಪ್ರದೇಶಕ್ಕೂ ವ್ಯಾಪಿಸಿದ್ದು, ನುವಾಕೋಟ್, ಧಾಡಿಂಗ್, ಗೋರ್ಖಾ ಮತ್ತು ಚಿತ್ವಾನ್ ಜಿಲ್ಲೆಗಳಿಗೂ ಎಚ್ಚರಿಕೆ ನೀಡಲಾಗಿದೆ.
ಪ್ರವಾಹದ ಭೀತಿ ಹಿನ್ನೆಲೆಯಲ್ಲಿ ಕಾಠ್ಮಂಡುವಿನಿಂದ ರಸುವಾ, ನುವಾಕೋಟ್, ಚಿತ್ವಾನ್ ಮತ್ತು ಧಾಡಿಂಗ್ ಕಡೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬಿಹಾರದಲ್ಲೂ ಮುನ್ನೆಚ್ಚರಿಕೆ:
ನೇಪಾಳದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಹಾರ ಸರ್ಕಾರವೂ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಿದೆ. ಮುಖ್ಯ ಕಾರ್ಯದರ್ಶಿ ಪ್ರತ್ಯಯ ಅಮೃತ್ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಗಂಡಕ್ ಮತ್ತು ಕೋಶಿ ನದಿ ತೀರದ ಜಿಲ್ಲೆಗಳ ಅಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಮಾರುಕಟ್ಟೆ ಹಾಗೂ ಗಡಿ ಪ್ರದೇಶದಲ್ಲಿ ಭಾರಿ ಹಾನಿ
ಪ್ರವಾಹದ ಅಬ್ಬರಕ್ಕೆ ತಿಮುರೆ ಬಜಾರ್ ಮತ್ತು ಸಮೀಪದ ಕಸ್ಟಮ್ಸ್ ಪ್ರದೇಶದಲ್ಲಿ ಅಪಾರ ಹಾನಿಯುಂಟಾಗಿದ್ದು, ವಾಹನಗಳು ಹಾಗೂ ಸರಕುಗಳು ಕೊಚ್ಚಿಹೋಗಿವೆ. ಕಳೆದ ವರ್ಷ ಪ್ರವಾಹ ಸಂಭವಿಸಿದ್ದ ಸ್ಥಳದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆಯೂ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.
ತಿಮುರೆಯ ಏರಿಯಾ ಪೊಲೀಸ್ ಠಾಣೆ, ಶ್ಯಾಪ್ರುಬೇಸಿ ಮತ್ತು ರಸುವಾಗಡಿಯ ಪೊಲೀಸ್ ಚೌಕಿಗಳು ಸೇರಿದಂತೆ ಹಲವು ಪೊಲೀಸ್ ಕಚೇರಿಗಳು ಹಾನಿಗೊಳಗಾಗಿವೆ. ನೇಪಾಳ-ಚೀನಾ ಗಡಿಯ ತಿಮುರೆಯಲ್ಲಿ ನಿಯೋಜಿಸಲಾಗಿದ್ದ ಸಶಸ್ತ್ರ ಪೊಲೀಸ್ ಪಡೆಯ ಒಂಬತ್ತು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಇದಲ್ಲದೆ, ಜಲವಿದ್ಯುತ್ ಯೋಜನೆಗಳ ಮೂಲಸೌಕರ್ಯಗಳು, ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿದ್ದು, ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ರಕ್ಷಣಾ ಪಡೆಗಳ ನಿಯೋಜನೆ
ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ಪರಿಸ್ಥಿತಿ, ಹಾನಿ ಹಾಗೂ ರಕ್ಷಣಾ ಕಾರ್ಯಗಳ ಪರಿಶೀಲನೆಗಾಗಿ ಸಚಿವ ಸಂಪುಟದ ತುರ್ತು ಸಭೆ ನಡೆಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಂತ್ರಸ್ತ ಪ್ರದೇಶಕ್ಕೆ ಸೇನೆಯ ಎರಡು ಹೆಲಿಕಾಪ್ಟರ್ಗಳನ್ನು ರವಾನಿಸಲಾಗಿದೆ.
ಭೋಟೆ ಕೋಶಿ ಮತ್ತು ತ್ರಿಶೂಲಿ ನದಿ ತೀರದಲ್ಲಿ ವಾಸಿಸುವ ಜನರು ತೀವ್ರ ಜಾಗರೂಕರಾಗಿರಬೇಕು ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ನೇಪಾಳದ ಗೃಹ ಸಚಿವ ಸುದನ್ ಗುರುಂಗ್ ಹಾಗೂ ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಈ ಮಧ್ಯೆ, ನೇಪಾಳದಲ್ಲಿರುವ ಚೀನಾ ರಾಯಭಾರ ಕಚೇರಿಯು ತುರ್ತು ಸ್ಪಂದನಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ಸಂತ್ರಸ್ತ ಪ್ರದೇಶಗಳಲ್ಲಿರುವ ಚೀನಾ ನಾಗರಿಕರು ಹಾಗೂ ಉದ್ಯಮಗಳ ಸ್ಥಿತಿಗತಿಯನ್ನು ಪರಿಶೀಲಿಸಿರುವ ರಾಯಭಾರ ಕಚೇರಿಯು, ರಕ್ಷಣಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸುವಂತೆ ನೇಪಾಳ ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ಲದೆ, ತನ್ನ ನಾಗರಿಕರಿಗೆ ಅಗತ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕಳೆದ ವರ್ಷವೂ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಭಾರಿ ಪ್ರವಾಹಕ್ಕೆ 9 ಮಂದಿ ಮೃತಪಟ್ಟಿದ್ದು, 24 ಜನರು ನಾಪತ್ತೆಯಾಗಿದ್ದರು. ಅಲ್ಲದೆ, ನೇಪಾಳ-ಚೀನಾ ಸಂಪರ್ಕಿಸುವ ಸೇತುವೆಯೂ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿತ್ತು. ಟಿಬೆಟ್ನ ಹಿಮನದಿ ಸರೋವರ ಒಡೆದು ಹರಿದ ಪರಿಣಾಮ ಈ ದುರಂತ ಸಂಭವಿಸಿತ್ತು.
Nepal flash flood –
— Sachin Gupta (@Sachingupta) August 26, 2026
नेपाली मीडिया रिपोर्ट के मुताबिक, अभी तक 32 पुलिसकर्मियों, 25 पिलग्रिम सहित बड़ी संख्या में लोगों के लापता होने की सूचना है। मतलब इनसे संपर्क कट गया है। हैलिकॉप्टरों ने 12 लोगों को सुरक्षित रेस्क्यू किया है। कई हाइड्रो पॉवर प्रोजेक्ट बह गए हैं।
पत्रकार… https://t.co/C6kuBf1HJp pic.twitter.com/UsZRTxSdX9






