ಫ್ಲೋರಿಡಾ: ಟ್ರಕ್ ಅಪಘಾತದಲ್ಲಿ ಮೂವರ ಸಾವಿನ ಬಳಿಕ ಟ್ರಕ್ ಚಾಲಕರ ವೀಸಾಗೆ ತಾತ್ಕಾಲಿಕ ತಡೆ

ಟ್ರಕ್ ಚಾಲಕ ಹರ್ಜೀಂದರ್ ಸಿಂಗ್ PC: x.com/americanspress
ವಾಷಿಂಗ್ಟನ್: ಅಮೆರಿಕದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ವಾಣಿಜ್ಯ ಟ್ರಕ್ ಚಾಲಕರ ವೀಸಾ ನೀಡಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಈ ಬಗ್ಗೆ ಎಕ್ಸ್ ನಲ್ಲಿ ಅಧಿಕೃತ ಪ್ರಕಟಣೆ ನೀಡಿದ್ದಾರೆ.
"ಅಮೆರಿಕದ ರಸ್ತೆಗಳಲ್ಲಿ ದೊಡ್ಡ ಟ್ರ್ಯಾಕ್ಟರ್-ಟ್ರೈಲರ್ ಟ್ರಕ್ ಗಳನ್ನು ದೊಡ್ಡ ಸಂಖ್ಯೆಯ ವಿದೇಶಿ ಚಾಲಕರು ಓಡಿಸುತ್ತಿದ್ದು, ಅಮೆರಿಕನ್ ಟ್ರಕ್ ಕಾರ್ಮಿಕರ ಜೀವನಾಧಾರವನ್ನು ಕಸಿದುಕೊಳ್ಳುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಫ್ಲೋರಿಡಾದಲ್ಲಿ ಆಗಸ್ಟ್ 12ರಂದು ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಅಪಘಾತಕ್ಕೆ ಕಾರಣವಾದ ಲಾರಿಯನ್ನು ಭಾರತದ ಹರ್ಜೀಂದರ್ ಸಿಂಗ್ ಎಂಬಾತ ಚಲಾಯಿಸುತ್ತಿದ್ದ. ಆತ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶ ಪಡೆದಿದ್ದ ಎನ್ನುವುದು ಆ ಬಳಿಕ ತನಿಖೆಯಿಂದ ತಿಳಿದು ಬಂದಿತ್ತು.
ಸಿಂಗ್ 2018ರಲ್ಲಿ ಮೆಕ್ಸಿಕೊ ಗಡಿಯ ಮೂಲಕ ಅಮೆರಿಕ ಪ್ರವೇಶಿಸಿ ಕ್ಯಾಲಿಫೋರ್ನಿಯಾದ ಫ್ಲೋರಿಡಾ ಹೆದ್ದಾರಿ ಸುರಕ್ಷೆ ಮತ್ತು ಮೋಟಾರು ವಾಹನಗಳ ಇಲಾಖೆಯಿಂದ ವಾಣಿಜ್ಯ ಚಾಲಕ ಲೈಸನ್ಸ್ ಪಡೆದಿದ್ದ.
ಇತರರ ಸುರಕ್ಷತೆ ಬಗ್ಗೆ ಕಾಳಜಿ ವಹಿಸದೇ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಿದ್ದ ಆರೋಪ ಹರ್ಜೀಂದರ್ ಸಿಂಗ್ ಮೇಲಿದೆ. ಹರ್ಜೀಂದರ್ ಚಲಾಯಿಸುತ್ತಿದ್ದ ಟ್ರಕ್ ಅನಧಿಕೃತವಾಗಿ ಯು ಟರ್ನ್ ತೆಗೆದುಕೊಂಡದ್ದು ಅಪಘಾತಕ್ಕೆ ಕಾರಣವಾಗಿತ್ತು.





