ಇರಿತಕ್ಕೊಳಗಾದ flydubai ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಆರೋಗ್ಯ ಸ್ಥಿರ: ಭಾರತೀಯ ರಾಯಭಾರಿ ಕಚೇರಿ ಮಾಹಿತಿ

ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Photo: The Hindu)
ಹೊಸದಿಲ್ಲಿ: ದುಬೈ–ಟೆಲ್ ಅವಿವ್ ಮಾರ್ಗದ ಫ್ಲೈದುಬೈ ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿದ ಸಹಪೈಲಟ್ನೊಂದಿಗೆ ಹೋರಾಡಿ, ನೂರಾರು ಪ್ರಯಾಣಿಕರ ಜೀವ ಉಳಿಸಲು ನೆರವಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಬುಧವಾರ ಬೆಳಿಗ್ಗೆ 180 ಪ್ರಯಾಣಿಕರನ್ನು ಹೊತ್ತು ದುಬೈ ನಿಂದ ಟೆಲ್ ಅವಿವ್ ಗೆ ಹಾರಾಟ ನಡೆಸುತ್ತಿದ್ದ ಫ್ಲೈದುಬೈ ವಿಮಾನವನ್ನು ಸಹಪೈಲಟ್ ಪತನಗೊಳಿಸಲು ಯತ್ನಿಸಿದನು. ಅದನ್ನು ತಡೆಯಲು ಸ್ಮಿತ್ ಮಚ್ಚರ್ ಪ್ರಯತ್ನಿಸಿದಾಗ ಸಹಪೈಲಟ್ ಅವರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿದೆ.
ಸುಮಾರು 34,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ಬೋಯಿಂಗ್ 737 ವಿಮಾನವು 10.51ರ ಸುಮಾರಿಗೆ (IST) ಏಕಾಏಕಿ ಕೆಳಮುಖವಾಗಿ ಇಳಿಯಲು ಆರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ ನಿಮಿಷಕ್ಕೆ ಸುಮಾರು 23,000 ಅಡಿ ವೇಗದಲ್ಲಿ ಇಳಿದ ವಿಮಾನವು ಸುಮಾರು 15,600 ಅಡಿ ಎತ್ತರಕ್ಕೆ ತಲುಪಿತು.
ಸಹಪೈಲಟ್ ಮಚ್ಚರ್ ಅವರಿಗೆ ಇರಿದ ಕೆಲವೇ ಸೆಕೆಂಡುಗಳ ಬಳಿಕ ಪ್ರಯಾಣಿಕರು ಆತನನ್ನು ಹಿಡಿದು ನಿಯಂತ್ರಣಕ್ಕೆ ತಂದರು. ಬಳಿಕ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡಲಾಗಿತ್ತು.






