ಗಾಝಾದಲ್ಲಿ `ಕಾನ್ಸಂಟ್ರೇಷನ್ ಕ್ಯಾಂಪ್' ರಚಿಸಲು ಇಸ್ರೇಲ್ ಯೋಜನೆ: ಇಸ್ರೇಲ್ ನ ಮಾಜಿ ಪ್ರಧಾನಿ ಒಲ್ಮರ್ಟ್ ಟೀಕೆ
`ಮಾನವೀಯ ನಗರ'ದ ಹೆಸರಲ್ಲಿ ಜನಾಂಗೀಯ ಶುದ್ಧೀಕರಣ: ಆರೋಪ

PC | Reuters
ಲಂಡನ್, ಜು.14: ಗಾಝಾದಲ್ಲಿ ಸ್ಥಳಾಂತರಗೊಂಡ ಫೆಲೆಸ್ತೀನೀಯರಿಗೆ `ಮಾನವೀಯ ನಗರ'ವನ್ನು ನಿರ್ಮಿಸುವ ಯೋಜನೆ ಕಾನ್ಸಂಟ್ರೇಷನ್ ಶಿಬಿರ'ವನ್ನು ನಿರ್ಮಿಸುವುದಕ್ಕೆ ಸಮವಾಗಿದೆ ಎಂದು ಇಸ್ರೇಲ್ ನ ಮಾಜಿ ಪ್ರಧಾನಿ ಎಹುದ್ ಒಲ್ಮರ್ಟ್ ಟೀಕಿಸಿದ್ದಾರೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಕಳೆದ ವಾರ ವಿವರಿಸಿರುವ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಬೆಂಬಲಿಸಿರುವ ಈ ಯೋಜನೆಯು ಪ್ರಾಥಮಿಕ ಹಂತದಲ್ಲಿ ಸುಮಾರು 6 ಲಕ್ ಫೆಲೆಸ್ತೀನೀಯರನ್ನು ಮತ್ತು ಅಂತಿಮವಾಗಿ 2 ದಶಲಕ್ಷಕ್ಕೂ ಹೆಚ್ಚಿನ ಗಾಝಾ ಜನಸಮುದಾಯವನ್ನು ರಫಾ ನಗರದ ಪ್ರದೇಶವೊಂದಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದೆ. ಅಲ್ಲಿಗೆ ಬಂದ ನಂತರ ವಿದೇಶಕ್ಕೆ ವಿದೇಶಕ್ಕೆ ಪ್ರಯಾಣಸಲು ಮಾತ್ರ ಅವಕಾಶ ನೀಡಲಾಗುತ್ತದೆ.
`ಇದೊಂದು ಕಾನ್ಸಂಟ್ರೇಷನ್ ಕ್ಯಾಂಪ್ ಎಂದು ಹೇಳಲು ನನಗೆ ಬೇಸರವಾಗುತ್ತದೆ. ಒಂದು ವೇಳೆ ಅವರು(ಫೆಲೆಸ್ತೀನೀಯರು) ಹೊಸ `ಮಾನವೀಯ ನಗರ'ಕ್ಕೆ ಗಡೀಪಾರುಗೊಂಡರೆ, ಇದು ಜನಾಂಗೀಯ ಶುದ್ಧೀಕರಣದ ಭಾಗವಾಗಿದೆ ಎಂದು ನೀವು ಹೇಳಬಹುದು. ಅವರು(ಇಸ್ರೇಲ್) ಗಾಝಾದ 50%ಕ್ಕಿಂತಲೂ ಹೆಚ್ಚಿನ ಭಾಗವನ್ನು `ಶುದ್ಧ'ಗೊಳಿಸುವ ಯೋಜನೆಯ ಭಾಗವಾಗಿ ಶಿಬಿರವನ್ನು ನಿರ್ಮಿಸಿದರೆ, ಅದು ಖಂಡಿತಾ ಫೆಲೆಸ್ತೀನೀಯರನ್ನು ಉಳಿಸುವ ಪ್ರಕ್ರಿಯೆಯಾಗುವುದಿಲ್ಲ. ಅವರನ್ನು ಗಡೀಪಾರು ಮಾಡುವುದು, ಅವರನ್ನು ಮೂಲೆಗೆ ತಳ್ಳುವುದು ಹಾಗೂ ಹೊರಗೆಸೆಯುವ ಯೋಜನೆಯಾಗಿದೆ. ಬೇರೇನೂ ಅರ್ಥ ನನಗೆ ಕಾಣುವುದಿಲ್ಲ' ಎಂದು ಎಹುದ್ ಒಲ್ಮರ್ಟ್ ಹೇಳಿದ್ದಾರೆ.
ಕಾಟ್ಜ್ ಪ್ರಸ್ತಾಪಿಸಿದ ಯೋಜನೆ `ಕೆಲವು ಪರಿಸ್ಥಿತಿಗಳಡಿ ನರಮೇಧದ ಅಪರಾಧಕ್ಕೆ ಕಾರಣವಾಗಬಹುದು ಎಂದು ಇಸ್ರೇಲ್ನ ಕಾನೂನು ತಜ್ಞರು ಹಾಗೂ ಪತ್ರಕರ್ತರು ಕಳೆದ ವಾರ ಎಚ್ಚರಿಕೆ ನೀಡಿದ್ದರು.
ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ವಸಾಹತುಗಾರರಿಂದ ಹಿಂಸಾಚಾರ ಹೆಚ್ಚಿರುವುದನ್ನು ಒಲ್ಮರ್ಟ್ ಖಂಡಿಸಿದ್ದಾರೆ. ಇದು ಕ್ಷಮೆಗೆ ಅರ್ಹವಲ್ಲ, ಸ್ವೀಕಾರಾರ್ಹವಲ್ಲ. ದೊಡ್ಡ ಗುಂಪೊಂದು ಅತ್ಯಂತ ಕ್ರೂರ, ಕ್ರಿಮಿನಲ್ ರೀತಿಯಲ್ಲಿ ನಿರಂತರ ಹಿಂಸಾಚಾರದಲ್ಲಿ ತೊಡಗಿದೆ. ಇಸ್ರೇಲಿ ಅಧಿಕಾರಿಗಳ ಬೆಂಬಲ ಮತ್ತು ರಕ್ಷಣೆಯಿಲ್ಲದೆ ಆಕ್ರಮಿತ ಪ್ರದೇಶದಲ್ಲಿ ಈ ರೀತಿಯ ನಿರಂತರ, ವ್ಯಾಪಕ ಹಿಂಸಾಚಾರವನ್ನು ಎಗ್ಗಿಲ್ಲದೆ ನಡೆಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.
2023ರ ಅಕ್ಟೋಬರ್ ನಲ್ಲಿ ಇಸ್ರೇಲ್ ಮೇಲೆ ನಡೆಸಿದ ದಾಳಿಯ ಬಳಿಕ ಗಾಝಾದ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣವನ್ನು ಆರಂಭದಲ್ಲಿ ತಾನು ಬೆಂಬಲಿಸಿದ್ದೆ. ಆದರೆ ಇಸ್ರೇಲ್ ಸರ್ಕಾರ ಯುದ್ಧವನ್ನು ನಿರ್ವಹಿಸಿದ ರೀತಿ ಮತ್ತು ಶಾಂತಿ ಮಾತುಕತೆಯನ್ನು ಕೈಬಿಟ್ಟಿರುವುದರಿಂದ ನಿರಾಶೆಯಾಗಿದೆ. ಇಸ್ರೇಲಿ ಮಿಲಿಟರಿಯ ಕೃತ್ಯಗಳು ವ್ಯಾಪಕ ಪ್ರಮಾಣದಲ್ಲಿ ಅಮಾಯಕ ಜನತೆಯ ಹತ್ಯೆಗೆ ಕಾರಣವಾಗಿದೆ ಎಂದು ತಾನು ನಂಬಿರುವುದರಿಂದ ಈ ಸರ್ಕಾರವು ಯುದ್ಧಾಪರಾಧಗಳಿಗೆ ಕಾರಣವಾಗಿದೆ ಎಂದು ಆರೋಪಿಸುವುದಕ್ಕೆ ಹಿಂಜರಿಯುವುದಿಲ್ಲ ಎಂದು ಎಹುದ್ ಒಲ್ಮರ್ಟ್ ಖಂಡಿಸಿದ್ದಾರೆ.
ಕಾನ್ಸಂಟ್ರೇಷನ್ ಕ್ಯಾಂಪ್
ಅಸಮರ್ಪಕ ಸೌಲಭ್ಯಗಳೊಂದಿಗೆ ತುಲನಾತ್ಮಕವಾಗಿ ಸಣ್ಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು, ವಿಶೇಷವಾಗಿ ರಾಜಕೀಯ ಕೈದಿಗಳು ಅಥವಾ ಕಿರುಕುಳಕ್ಕೊಳಗಾದ ಅಲ್ಪಂಖ್ಯಾತ ಸಮುದಾಯದ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಬಂಧನದಲ್ಲಿರಿಸುವ ಸ್ಥಳ. ಇವರನ್ನು ಕೆಲವೊಮ್ಮೆ ಬಲವಂತದ ದುಡಿಮೆಗೆ ಬಳಸಿಕೊಳ್ಳಲಾಗುತ್ತದೆ. 1933-45ರ ಅವಧಿಯಲ್ಲಿ ಜರ್ಮನಿ ಮತ್ತು ಆಕ್ರಮಿತ ಯುರೋಪ್ ನಲ್ಲಿ ನಾಝಿಗಳು ಇಂತಹ ಶಿಬಿರಗಳನ್ನು ಸ್ಥಾಪಿಸಿದ್ದರು.







