ಜಪಾನ್ನ ಮಾಜಿ ಪ್ರಧಾನಿ ಶಿಂರೊ ಆಬೆ ಹತ್ಯೆ ಆರೋಪಿಗೆ ಜೀವಾವಧಿ ಶಿಕ್ಷೆ

ತೆತ್ಸುಯಾ ಯಾಮಾಗಾಮಿ | Photo Credit : AP \ PTI
ಟೋಕಿಯೊ, ಜ. 21: ಜಪಾನ್ನ ಮಾಜಿ ಪ್ರಧಾನಿ ಶಿಂರೊ ಆಬೆ ಅವರನ್ನು ಹತ್ಯೆಗೈದ ಆರೋಪಿಯ ಅಪರಾಧ ಸಾಬೀತಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇಡೀ ಜಗತ್ತನ್ನು ಬೆಚ್ಚಿಬೀಳಿಸಿದಂತೆ, ಶಿಂರೊ ಆಬೆ ಅವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದ ಮೂರು ವರ್ಷಗಳ ಬಳಿಕ 45 ವರ್ಷದ ತೆತ್ಸುಯಾ ಯಾಮಾಗಾಮಿ ವಿರುದ್ಧ ತೀರ್ಪು ಪ್ರಕಟವಾಗಿದೆ.
ಯಾಮಾಗಾಮಿ ವಿರುದ್ಧ ಕೊಲೆ ಹಾಗೂ ಶಸ್ತ್ರಾಸ್ತ್ರ ನಿಯಂತ್ರಣ ಕಾನೂನುಗಳ ಉಲ್ಲಂಘನೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. 2022ರ ಜುಲೈನಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಶಿಂರೊ ಆಬೆ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
ಅಕ್ಟೋಬರ್ ನಲ್ಲಿ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದು, ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರೂ ಜಪಾನ್ ಕಾನೂನು ಪ್ರಕಾರ ವಿಚಾರಣೆ ಮುಂದುವರಿಸಲಾಗಿತ್ತು.
‘ಯುನಿಫಿಕೇಶನ್ ಚರ್ಚ್’ ಎಂಬ ಕ್ರೈಸ್ತ ಪಂಥವನ್ನು ಕಳಂಕಿತಗೊಳಿಸುವ ಉದ್ದೇಶದಿಂದಲೇ ಆಬೆ ಅವರನ್ನು ಹತ್ಯೆಗೈಯಲಾಯಿತು ಎಂದು ಪ್ರಾಸಿಕ್ಯೂಟರ್ ಗಳು ಆರೋಪಿಸಿದ್ದರು.
ತನ್ನ ತಾಯಿ ಚರ್ಚ್ಗೆ ಅತಿಯಾದ ದೇಣಿಗೆ ನೀಡುತ್ತಿದ್ದುದರಿಂದ ಕುಟುಂಬ ದಿವಾಳಿಯಾಗಿತ್ತು. ಚರ್ಚ್ಗಳ ಬೆಳವಣಿಗೆಗೆ ಪ್ರಭಾವಿ ರಾಜಕಾರಣಿಗಳು ಕಾರಣರಾಗಿದ್ದಾರೆ ಎಂಬ ನಂಬಿಕೆಯಿಂದ, ಆಬೆ ಅವರಂತಹ ವ್ಯಕ್ತಿಯನ್ನು ಹತ್ಯೆಗೈದರೆ ಸಾರ್ವಜನಿಕ ಗಮನ ಸೆಳೆಯಬಹುದು ಎಂದು ಯಾಮಾಗಾಮಿ ನಂಬಿದ್ದ. ಈ ವಿಷಯವನ್ನು ಆತ ಪಶ್ಚಿಮ ಜಪಾನ್ ನ ನಾರಾ ಪ್ರಾಂತದ ನ್ಯಾಯಾಲಯದಲ್ಲಿ ತಿಳಿಸಿದ್ದ.
ಚರ್ಚ್ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಆಬೆ ಅವರು ಭಾಗವಹಿಸುತ್ತಿದ್ದರು.







