ಚೀನಾ ಚಿಪ್ ಹಗರಣದ ವಿವಾದದಲ್ಲಿ Nvidiaದ ಮಾಜಿ ಅಧಿಕಾರಿ ಜೇ ಪುರಿ
2.5 ಬಿಲಿಯನ್ ಡಾಲರ್ ಮೌಲ್ಯದ GPUಗಳ ಅಕ್ರಮ ವರ್ಗಾವಣೆ ಪ್ರಕರಣ

Photo :India today
ನ್ಯೂಯಾರ್ಕ್: ಚೀನಾಕ್ಕೆ 2.5 ಬಿಲಿಯನ್ ಡಾಲರ್ ಮೌಲ್ಯದ ಸುಧಾರಿತ ಚಿಪ್ ಗಳನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪಕ್ಕೆ ಸಂಬಂಧಿಸಿದ ವಿವಾದದಲ್ಲಿ Nvidiaದ ಮಾಜಿ ಮೂರನೇ ಅತ್ಯುನ್ನತ ಕಾರ್ಯನಿರ್ವಾಹಕ ಅಧಿಕಾರಿ ಜೇ ಪುರಿ ಹೆಸರು ಪ್ರಸ್ತಾಪವಾಗಿದೆ. ಸೂಪರ್ ಮೈಕ್ರೋ ಕಂಪೆನಿಯ ಮಾಜಿ ಚೀಫ್ ಗ್ರೋತ್ ಆಫೀಸರ್ ಸೆನ್ಲಿ ಚೆನ್ ವಿರುದ್ಧ ಈ ಪ್ರಕರಣದಲ್ಲಿ ಷೇರುದಾರರು ಮೊಕದ್ದಮೆ ದಾಖಲಿಸಿದ್ದಾರೆ. ಇದೇ ವೇಳೆ, ಜೇ ಪುರಿ ಅವರೊಂದಿಗೆ ಛಾಯಾಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಮಹಿಳೆ ಸೆನ್ಲಿ ಚೆನ್ ಅವರೇ ಎಂಬ ಪ್ರಶ್ನೆಯನ್ನು ಅಮೆರಿಕದ ಹೂಡಿಕೆ ಸಂಸ್ಥೆ ಮಡ್ಡಿ ವಾಟರ್ಸ್ ಎತ್ತಿದೆ.
ನ. 17ರಂದು 'Nvidia: More China' ಶೀರ್ಷಿಕೆಯಡಿ ಪ್ರಕಟಿಸಿದ ವರದಿಯಲ್ಲಿ ಮಡ್ಡಿ ವಾಟರ್ಸ್, ಸಾರ್ವಜನಿಕವಾಗಿ ಲಭ್ಯವಿರುವ ಹಲವು ಫೊಟೋಗಳನ್ನು ಪರಿಶೀಲಿಸಿದೆ. ಜೇ ಪುರಿ ಅವರೊಂದಿಗೆ ಕಾಣಿಸಿಕೊಂಡಿರುವ ಮಹಿಳೆ ಸೆನ್ಲಿ ಚೆನ್ ಅವರೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದೆ. ಸೆನ್ಲಿ ಚೆನ್ ಈ ಹಿಂದೆ ಸೂಪರ್ ಮೈಕ್ರೋ ಕಂಪೆನಿಯ ಚೀಫ್ ಗ್ರೋತ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು. ಫೊಟೋದಲ್ಲಿರುವ ಮಹಿಳೆ ಮತ್ತು ಸೂಪರ್ ಮೈಕ್ರೋದ ಮಾಜಿ ಚೀಫ್ ಗ್ರೋತ್ ಆಫೀಸರ್ ಒಬ್ಬರೇ ಎಂಬುದನ್ನು ಮಡ್ಡಿ ವಾಟರ್ಸ್ ಪ್ರಶ್ನಿಸಿದೆ. ಆದರೆ, ಇಬ್ಬರೂ ಒಬ್ಬರೇ ಎಂಬುದನ್ನು ಸಂಸ್ಥೆ ಖಚಿತಪಡಿಸಿಲ್ಲ.
ಸೂಪರ್ ಮೈಕ್ರೋಗೆ Nvidiaದ ಗ್ರಾಫಿಕ್ಸ್ ಸಂಸ್ಕರಣಾ ಘಟಕಗಳ (GPU) ಖರೀದಿ ಮತ್ತು ಗ್ರಾಹಕರಿಗೆ ಅವುಗಳ ಹಂಚಿಕೆ ನಿರ್ವಹಿಸುವಲ್ಲಿ ಚೆನ್ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪವೂ ಇದೆ.
ಜೇ ಪುರಿ Nvidiaದ ಸಾಮಾನ್ಯ ಉದ್ಯೋಗಿಯಾಗಿರಲಿಲ್ಲ. ಕಂಪೆನಿಯ ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್ ಮತ್ತು ಪ್ರಸ್ತುತ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿರುವ ಕೊಲೆಟ್ ಕ್ರೆಸ್ ನಂತರ ಅವರು ಮೂರನೇ ಅತ್ಯುನ್ನತ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.
2026ರ ಜೂನ್ ನಲ್ಲಿ ಕಾರ್ಯನಿರ್ವಾಹಕ ಹುದ್ದೆಯಿಂದ ನಿರ್ಗಮಿಸುವವರೆಗೆ ಅವರು ವಿಶ್ವಾದ್ಯಂತ ಕ್ಷೇತ್ರ ಕಾರ್ಯಾಚರಣೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮಾರಾಟ, ವ್ಯವಹಾರ ಅಭಿವೃದ್ಧಿ, ಪಾಲುದಾರಿಕೆಗಳು, ಇಂಜಿನಿಯರಿಂಗ್, ಪ್ರಾಜೆಕ್ಟ್ ನಿರ್ವಹಣೆ ಹಾಗೂ ಗ್ರಾಹಕ ಬೆಂಬಲ ಸೇವೆಗಳು ಸೇರಿದಂತೆ ಕಂಪೆನಿಯ ಜಾಗತಿಕ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರು.
2024ರಿಂದ 2026ರ ಆರ್ಥಿಕ ವರ್ಷಗಳ ಅವಧಿಯಲ್ಲಿ ಪುರಿ ಪಡೆದ ಒಟ್ಟು ಸಂಭಾವನೆಯು ಕೊಲೆಟ್ ಕ್ರೆಸ್ ಅವರ ಸಂಭಾವನೆಗಿಂತ ಸ್ವಲ್ಪ ಹೆಚ್ಚಿತ್ತು. Nvidiaದ 2026ರ ಪ್ರಾಕ್ಸಿ ಹೇಳಿಕೆಯಲ್ಲಿ ಹೆಸರಿಸಲಾದ ಐವರು ಕಾರ್ಯನಿರ್ವಾಹಕರಲ್ಲಿ ಅವರೂ ಒಬ್ಬರಾಗಿದ್ದರು.
ಜೂನ್ ಅಂತ್ಯದಲ್ಲಿ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದರೂ Nvidiaದ ಹಿರಿಯ ಸಲಹೆಗಾರರಾಗಿ ಮುಂದುವರಿದಿದ್ದರು. ಜೂ. 17ರ ವೇಳೆಗೆ ಅವರ ಬಳಿ 36,65,220 Nvidia ಷೇರುಗಳಿದ್ದವು. ನ. 16ರ ಷೇರು ಮಾರುಕಟ್ಟೆಯ ಮುಕ್ತಾಯದ ಬೆಲೆಯ ಪ್ರಕಾರ ಇವುಗಳ ಮೌಲ್ಯ ಸುಮಾರು 570 ಮಿಲಿಯನ್ ಡಾಲರ್ ಆಗಿತ್ತು.
ಪುರಿ ಅವರೊಂದಿಗಿರುವ ಮಹಿಳೆಯ ಗುರುತಿನ ಬಗ್ಗೆ ಮಡ್ಡಿ ವಾಟರ್ಸ್ ತನಿಖೆ ನಡೆಸಿದೆ. 2024ರಲ್ಲಿ ನಡೆದ ಸ್ಯಾನ್ ಫ್ರಾನ್ಸಿಸ್ಕೊ ಒಪೇರಾದ ಮಾಸ್ಕ್ಡ್ ಬಾಲ್ ಕಾರ್ಯಕ್ರಮ ಮತ್ತು 2026ರ ಎ. 23ರಂದು ನಡೆದ ಬಿಗ್ ಬ್ಯಾಂಗ್ ಗಾಲಾ ಹಾಗೂ ಪಾರ್ಟಿ ಆಫ್ಟರ್ ಡಾರ್ಕ್ ಕಾರ್ಯಕ್ರಮಗಳ ಫೋಟೊಗಳನ್ನೂ ಪರಿಶೀಲಿಸಲಾಗಿದೆ. ಈ ಚಿತ್ರಗಳನ್ನು Nvidiaದ GPU ತಂತ್ರಜ್ಞಾನ ಸಮ್ಮೇಳನದಲ್ಲಿ ಸಂದರ್ಶನಕ್ಕೆ ಒಳಗಾಗಿದ್ದ ಸೂಪರ್ ಮೈಕ್ರೋದ ಸೆನ್ಲಿ ಚೆನ್ ಅವರ ಫೊಟೋದೊಂದಿಗೆ ಹೋಲಿಸಲಾಗಿದೆ.
ಪುರಿ ಅವರೊಂದಿಗಿನ ಮಹಿಳೆ ಸೆನ್ಲಿ ಚೆನ್ ಅವರೇ ಎಂಬ ಬಗ್ಗೆ ಸ್ಪಷ್ಟನೆ ಪಡೆಯಲು, ಚೆನ್ ಪ್ರಸ್ತುತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಕ್ರೊನೊಸ್ಕೇಲ್ ಕಂಪೆನಿಯ ಹೂಡಿಕೆದಾರರ ಸಂಬಂಧ ವಿಭಾಗವನ್ನು ಸಂಪರ್ಕಿಸಿರುವುದಾಗಿ ಮಡ್ಡಿ ವಾಟರ್ಸ್ ತಿಳಿಸಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಚಿಪ್ ಖರೀದಿ ಮತ್ತು ಹಂಚಿಕೆಯಲ್ಲಿ ಚೆನ್ ಪಾತ್ರದ ಆರೋಪ
ಸೆನ್ಲಿ ಚೆನ್ ವಿರುದ್ಧದ ಆರೋಪಗಳು 2026ರ ಅಕ್ಟೋಬರ್ನಲ್ಲಿ ಸೂಪರ್ ಮೈಕ್ರೋ ಕಂಪ್ಯೂಟರ್ ವಿರುದ್ಧ ದಾಖಲಾದ ಏಕೀಕೃತ ಷೇರುದಾರರ ಸಾಮೂಹಿಕ ಮೊಕದ್ದಮೆಯಲ್ಲಿ ಪ್ರಸ್ತಾಪವಾಗಿವೆ.
ಸೂಪರ್ ಮೈಕ್ರೋಗೆ Nvidia GPUಗಳನ್ನು ಖರೀದಿಸುವುದು ಮತ್ತು ಗ್ರಾಹಕರಿಗೆ ಅವುಗಳನ್ನು ಹಂಚಿಕೆ ಮಾಡುವುದರಲ್ಲಿ ಚೆನ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. Nvidia ಜೊತೆ ಅವರು ನಿಕಟ ಸಂಪರ್ಕ ಹೊಂದಿದ್ದರು. ಸೀಮಿತ ಪ್ರಮಾಣದಲ್ಲಿ ಲಭ್ಯವಿದ್ದ ಚಿಪ್ ಗಳ ಹಂಚಿಕೆ ಕುರಿತ ನಿರ್ಧಾರಗಳಲ್ಲೂ ಭಾಗಿಯಾಗಿದ್ದರು ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.
Nvidia ಜೊತೆಗಿನ ವ್ಯವಹಾರಗಳ ಕುರಿತು ಚರ್ಚಿಸಲು ಹಾಗೂ ಚಿಪ್ ಗಳ ಹಂಚಿಕೆಗೆ ಅನುಮೋದನೆ ಪಡೆಯಲು ಅವರು ಸೂಪರ್ ಮೈಕ್ರೋದ ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಲಿಯಾಂಗ್ ಅವರನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದರು ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.
ಚೀನಾಕ್ಕೆ ಅಕ್ರಮವಾಗಿ ಚಿಪ್ ಗಳನ್ನು ವರ್ಗಾಯಿಸುವ ಯೋಜನೆಯ ಬಗ್ಗೆ ಚೆನ್ ಗೆ ತಿಳಿದಿತ್ತು ಎಂಬುದು ಮೊಕದ್ದಮೆಯಲ್ಲಿನ ಪ್ರಮುಖ ಆರೋಪವಾಗಿದೆ. ಅವರ ಜವಾಬ್ದಾರಿಗಳು ಮತ್ತು ಪಾತ್ರವನ್ನು ಗಮನಿಸಿದರೆ, ಈ ಅಕ್ರಮದ ಬಗ್ಗೆ ಅವರಿಗೆ ಯಾವುದೇ ಅರಿವಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ದೂರಿನಲ್ಲಿ ಪ್ರತಿಪಾದಿಸಲಾಗಿದೆ.
2026ರ ಮೇ ತಿಂಗಳಲ್ಲಿ ಚೆನ್ ಸೂಪರ್ ಮೈಕ್ರೋ ತೊರೆದ ಬಳಿಕವಷ್ಟೇ ಕಂಪೆನಿಯ ಚಿಪ್ ವರ್ಗಾವಣೆ ಯೋಜನೆ ಸಾರ್ವಜನಿಕವಾಗಿ ಬಹಿರಂಗವಾಯಿತು ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.
ಮಾಜಿ ಉದ್ಯೋಗಿಯೊಬ್ಬರು ನೀಡಿದ ಮಾಹಿತಿಯನ್ನು ಉಲ್ಲೇಖಿಸಿರುವ ದೂರಿನ ಪ್ರಕಾರ, ಚೀನಾದ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎನ್ನಲಾದ GPUಗಳಿಗೆ ಸಂಬಂಧಿಸಿದ ಸರಣಿ ಸಂಖ್ಯೆಗಳನ್ನು ಹೊಂದಿದ್ದ ಚಿಪ್ ಗಳನ್ನು ಬಿಡುಗಡೆ ಮಾಡುವಂತೆ ಚೆನ್ Nvidiaಗೆ ಮನವಿ ಮಾಡಿದ್ದರು. ಈ ಯೋಜನೆಯಲ್ಲಿ ಪ್ರಸ್ತುತ ಉದ್ಯೋಗಿಗಳು ಯಾರೂ ಭಾಗಿಯಾಗಿಲ್ಲ ಎಂದು ಸೂಪರ್ ಮೈಕ್ರೋ ವಾದಿಸಲು ಅನುಕೂಲವಾಗುವಂತೆ ಅವರು ರಾಜೀನಾಮೆ ನೀಡಿದ್ದರು ಎಂಬ ಆರೋಪವೂ ಇದೆ.
2.5 ಬಿಲಿಯನ್ ಡಾಲರ್ ಮೌಲ್ಯದ ಚಿಪ್ಗಳ ಅಕ್ರಮ ವರ್ಗಾವಣೆ
ಸೂಪರ್ ಮೈಕ್ರೋ ವಿರುದ್ಧದ ಆರೋಪಗಳು ಷೇರುದಾರರ ಮೊಕದ್ದಮೆಗೆ ಮಾತ್ರ ಸೀಮಿತವಾಗಿಲ್ಲ. 2026ರ ಮಾರ್ಚ್ ನಲ್ಲಿ ಸೂಪರ್ ಮೈಕ್ರೋದ ಸಹ-ಸಂಸ್ಥಾಪಕ ಲಿಯಾವೊ ಸೇರಿದಂತೆ ಕಂಪೆನಿಯೊಂದಿಗೆ ಸಂಬಂಧ ಹೊಂದಿದ್ದ ಮೂವರ ವಿರುದ್ಧ ಅಮೆರಿಕದ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆಗ್ನೇಯ ಏಷ್ಯಾದ ನಕಲಿ ಕಂಪೆನಿಯೊಂದರ ಮೂಲಕ Nvidia GPUಗಳನ್ನು ಹೊಂದಿದ್ದ ಸರ್ವರ್ಗಳನ್ನು ಚೀನಾದ ಗ್ರಾಹಕರಿಗೆ ಅಕ್ರಮವಾಗಿ ವರ್ಗಾಯಿಸಲು ಸಂಚು ರೂಪಿಸಿದ ಆರೋಪ ಅವರ ಮೇಲಿದೆ.
ರಫ್ತು ನಿಯಂತ್ರಣಕ್ಕೆ ಒಳಪಟ್ಟ GPUಗಳನ್ನು ಹೊಂದಿದ್ದ ಸುಮಾರು 2.5 ಬಿಲಿಯನ್ ಡಾಲರ್ ಮೌಲ್ಯದ ಸರ್ವರ್ ಗಳನ್ನು ಚೀನಾದ ಖರೀದಿದಾರರಿಗೆ ಮಾರಾಟ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಅಮೆರಿಕದ ನ್ಯಾಯ ಇಲಾಖೆ ತಿಳಿಸಿದೆ.
ಈ ಕಾರ್ಯಾಚರಣೆಯಲ್ಲಿ ಬ್ಯಾಂಕಾಕ್ ಮೂಲದ OBON Corp ಎಂಬ ಕಂಪೆನಿ ಭಾಗಿಯಾಗಿತ್ತು. ಈ ಕಂಪೆನಿ 2024 ಮತ್ತು 2025ರ ನಡುವೆ ಸರ್ವರ್ ತಯಾರಕರಿಂದ ಸರ್ವರ್ ಗಳನ್ನು ಖರೀದಿಸಿತ್ತು.
ಅಮೆರಿಕದಲ್ಲಿ ಜೋಡಣೆಗೊಂಡ ಕನಿಷ್ಠ 510 ಮಿಲಿಯನ್ ಡಾಲರ್ ಮೌಲ್ಯದ ಸರ್ವರ್ ಗಳನ್ನು 2025ರ ಎಪ್ರಿಲ್ ಅಂತ್ಯದಿಂದ ಮೇ ಮಧ್ಯದವರೆಗೆ ಚೀನಾಕ್ಕೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅಕ್ರಮ ಸಾಗಣೆಯನ್ನು ಮರೆಮಾಚಲು ಆರೋಪಿಗಳು ಗೋದಾಮೊಂದರಲ್ಲಿ ನಕಲಿ ಸರ್ವರ್ ಗಳನ್ನು ಪ್ರದರ್ಶಿಸಿದ್ದರು. ಹೇರ್ ಡ್ರೈಯರ್ ಬಳಸಿ ಸರ್ವರ್ ಗಳ ಮೇಲಿದ್ದ ಲೇಬಲ್ ಗಳು ಮತ್ತು ಸರಣಿ ಸಂಖ್ಯೆಯ ಸ್ಟಿಕ್ಕರ್ ಗಳನ್ನು ತೆಗೆದುಹಾಕಿ ಬದಲಾಯಿಸಿದ್ದರು. ಬಳಿಕ ಉಪಕರಣಗಳನ್ನು ಮೂಲ ತಯಾರಕರ ಪೆಟ್ಟಿಗೆಗಳಲ್ಲಿ ಮರುಪ್ಯಾಕ್ ಮಾಡಿ, ಕಾನೂನುಬದ್ಧವಾಗಿ ಸಾಗಿಸಲಾಗುತ್ತಿದೆ ಎಂಬಂತೆ ಬಿಂಬಿಸಿದ್ದರು ಎಂದು ಅಮೆರಿಕದ ಅಭಿಯೋಜಕರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಕಣ್ಗಾವಲು ಕ್ಯಾಮೆರಾಗಳಲ್ಲಿ ದಾಖಲಿಸಲಾಗಿದೆ ಎಂದೂ ವರದಿಯಾಗಿದೆ.
ಕ್ರಿಮಿನಲ್ ಪ್ರಕರಣ ಮತ್ತು ಷೇರುದಾರರ ಸಿವಿಲ್ ಮೊಕದ್ದಮೆ ಪ್ರತ್ಯೇಕ ವಿಚಾರಣೆಗಳಾಗಿವೆ. ಕ್ರಿಮಿನಲ್ ಪ್ರಕರಣದಲ್ಲಿ ಅಕ್ರಮ ಚಿಪ್ ವರ್ಗಾವಣೆ ಯೋಜನೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾದ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಿವಿಲ್ ಮೊಕದ್ದಮೆಯಲ್ಲಿ ಸೆನ್ಲಿ ಚೆನ್ ಅವರ ಪಾತ್ರದ ಕುರಿತು ಹೆಚ್ಚುವರಿ ಆರೋಪಗಳನ್ನು ಮಾಡಲಾಗಿದೆ.
ಆರೋಪಗಳನ್ನು ತಳ್ಳಿಹಾಕಿದ ಸೂಪರ್ ಮೈಕ್ರೋ
ಸೆನ್ಲಿ ಚೆನ್ ಅವರ ಜವಾಬ್ದಾರಿಗಳು ಮತ್ತು Nvidia ಜೊತೆಗಿನ ವ್ಯವಹಾರಗಳಲ್ಲಿ ಅವರ ಪಾತ್ರದ ಕುರಿತು ಮಾಡಲಾಗಿರುವ ಆರೋಪಗಳನ್ನು ಸೂಪರ್ ಮೈಕ್ರೋ ತಳ್ಳಿಹಾಕಿದೆ.
ಬುಧವಾರ 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್'ಗೆ ನೀಡಿದ ಹೇಳಿಕೆಯಲ್ಲಿ, "Nvidia ಜೊತೆಗಿನ ಸೂಪರ್ ಮೈಕ್ರೋದ ಸಂಬಂಧವನ್ನು ಸೆನ್ಲಿ ಚೆನ್ ನಿರ್ವಹಿಸುತ್ತಿರಲಿಲ್ಲ. ಗ್ರಾಹಕರಿಗೆ Nvidia GPUಗಳನ್ನು ಹೇಗೆ ವಿತರಿಸಬೇಕು ಎಂಬುದನ್ನೂ ಅವರು ನಿರ್ಧರಿಸುತ್ತಿರಲಿಲ್ಲ" ಎಂದು ಕಂಪೆನಿ ಸ್ಪಷ್ಟಪಡಿಸಿದೆ.
ಸೂಪರ್ ಮೈಕ್ರೋದಲ್ಲಿ 18 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ, 2026ರ ಆರಂಭದಲ್ಲಿ ಚೆನ್ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಕಂಪೆನಿ ಹೇಳಿದೆ.







