ಬ್ರಿಟನ್: ಸಂಪುಟ ಸೇರಿದ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರಾನ್

ಡೇವಿಡ್ ಕ್ಯಾಮರಾನ್ (Photo: facebook.com/DavidCameronOfficial)
ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಮ್ಮ ಸಚಿವ ಸಂಪುಟವನ್ನು ಪುನರ್ರಚಿಸಿದ್ದು ಕಳೆದ ವಾರ ಲಂಡನ್ನಲ್ಲಿ ನಡೆದ ಫೆಲೆಸ್ತೀನ್ ಪರ ಪ್ರತಿಭಟನೆಯನ್ನು ಟೀಕಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಆಂತರಿಕ ಸಚಿವೆ ಸುಯೆಲಾ ಬ್ರೆವರ್ಮನ್ರನ್ನು ಸಂಪುಟದಿಂದ ಕೈಬಿಟ್ಟಿದ್ದು ಈ ಹುದ್ದೆಗೆ ಜೇಮ್ಸ್ ಕ್ಲೆವರ್ಲಿಯನ್ನು ನೇಮಿಸಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರಾನ್ ಸಂಪುಟಕ್ಕೆ ಅನಿರೀಕ್ಷಿತವಾಗಿ ಮರಳಿದ್ದು ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ.
ಈ ಮಧ್ಯೆ, ಪರಿಸರ ಇಲಾಖೆಯ ಸಚಿವೆ ಥೆರೆಸಾ ಕೋಫಿ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ: ಭಾರತೀಯ ಮೂಲದ ಸುಯೆಲ್ಲಾ ಬ್ರೆವರ್ಮನ್ ಕಳೆದ ವಾರ ನೀಡಿದ್ದ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದಿತ್ತು. ಶನಿವಾರ ಲಂಡನ್ನ ರಸ್ತೆಗಳಲ್ಲಿ ಫೆಲೆಸ್ತೀನಿಯರನ್ನು ಬೆಂಬಲಿಸಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆದಿತ್ತು. ರ್ಯಾಲಿಯ ಬಗ್ಗೆ ಮಾಧ್ಯಮದವ ಜತೆ ಪ್ರತಿಕ್ರಿಯಿಸಿದ್ದ ಬ್ರೆವರ್ಮನ್ ರ್ಯಾಲಿಯನ್ನು ಪೊಲೀಸರು ಸೂಕ್ತವಾಗಿ ನಿರ್ವಹಿಸಿಲ್ಲ ಎಂದು ಟೀಕಿಸಿದ್ದರು ಮತ್ತು ಗಾಝಾದಲ್ಲಿ ಕದನವಿರಾಮಕ್ಕೆ ಆಗ್ರಹಿಸುತ್ತಿದ್ದ ಪ್ರತಿಭಟನಾಕಾರರನ್ನು `ದ್ವೇಷ ಮೆರವಣಿಗೆಕಾರರು' ಎಂದು ವಿಶ್ಲೇಷಿಸಿದ್ದರು. `ಫೆಲೆಸ್ತೀನ್ ಪರ ಜಾಥಾ ನಡೆಸಿದ ಅಶಿಸ್ತಿನ ಜನರ ಗುಂಪು ಕಾನೂನು ಉಲ್ಲಂಘಿಸುತ್ತಿರುವುದನ್ನು ಲಂಡನ್ ಪೊಲೀಸರು ಕಡೆಗಣಿಸಿದ್ದಾರೆ' ಎಂದು ಟೀಕಿಸಿದ್ದರು. `ರ್ಯಾಲಿಯಲ್ಲಿ ಕೆಟ್ಟ ಮನಸ್ಥಿತಿಯ, ಪ್ರಚೋದನಕಾರಿ ಮತ್ತು ಕೆಲವು ಸಂದರ್ಭಗಳಲ್ಲಿ ಸ್ಪಷ್ಟ ಕ್ರಿಮಿನಲ್ ಘೋಷಣೆಗಳು, ಬ್ಯಾನರ್ಗಳು, ಉಪಕರಣಗಳನ್ನು ಬಹಿರಂಗವಾಗಿ ಪ್ರದರ್ಶಿಸಿರುವುದು ಅತ್ಯಂತ ಕೀಳುಮಟ್ಟವನ್ನು ಗುರುತಿಸುತ್ತದೆ. ಯೆಹೂದ್ಯ ವಿರೋಧಿ ಮತ್ತು ವರ್ಣಭೇದ ನೀತಿಯ ಜತೆಗೆ ಭಯೋತ್ಪಾದನೆಯನ್ನು ಶ್ಲಾಘಿಸುವ ಈ ಕ್ರಮ ಅತ್ಯಂತ ಕಳವಳಕ್ಕೆ ಕಾರಣವಾಗಿದೆ' ಎಂದವರು ಹೇಳಿದ್ದರು.
ಇದರ ಜತೆಗೆ, ಬ್ರಿಟನ್ನಲ್ಲಿ ವಲಸಿಗರ ಪ್ರಮಾಣ ಹೆಚ್ಚಿರುವ ಬಗ್ಗೆ ʼಎಕ್ಸ್' (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದ ಹೇಳಿಕೆಯಲ್ಲಿ `ಕೆಲವರಿಗೆ ಮನೆಯಿಲ್ಲದಿರುವುದು ಜೀವನಶೈಲಿಯ ಆಯ್ಕೆಯಾಗಿದೆ' ಎಂದು ಉಲ್ಲೇಖಿಸಿ ಮತ್ತೊಂದು ವಿವಾದ ಹುಟ್ಟುಹಾಕಿದ್ದರು.
ಮತ್ತೆ ಉನ್ನತ ಹುದ್ದೆಗೆ ಕ್ಯಾಮರಾನ್: ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರಾನ್ ಪ್ರಸ್ತುತ ಬ್ರಿಟನ್ ಸಂಸತ್ನ ಚುನಾಯಿತ ಸದಸ್ಯನಲ್ಲ. ಅವರನ್ನು ಹೌಸ್ ಆಫ್ ಲಾಡ್ರ್ಸ್ (ರಾಜ್ಯಸಭೆ)ಗೆ ನಾಮನಿರ್ದೇಶನ ಮಾಡುವ ಕೋರಿಕೆಯನ್ನು ಬ್ರಿಟನ್ ರಾಜ ಚಾಲ್ರ್ಸ್ ಅನುಮೋದಿಸಿರುವುದರಿಂದ ಸಂಪುಟಕ್ಕೆ ಸೇರ್ಪಡೆಗೊಳ್ಳುವ ದಾರಿ ಸುಗಮವಾಗಿದೆ ಎಂದು ಪ್ರಧಾನಿಯವರ ಕಚೇರಿ ಹೇಳಿಕೆ ನೀಡಿದೆ. 2010ರಿಂದ 2016ರವರೆಗೆ ಬ್ರಿಟನ್ ಪ್ರಧಾನಿಯಾಗಿದ್ದ ಕ್ಯಾಮರಾನ್ `ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹಣೆ'ಯಲ್ಲಿ ಸೋತ ನಂತರ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇದೀಗ ಆಂತರಿಕ ಸಚಿವರಾಗಿ ನೇಮಕಗೊಂಡಿರುವ ಜೇಮ್ಸ್ ಕ್ಲೆವರ್ಲಿಯ ಸ್ಥಾನದಲ್ಲಿ ವಿದೇಶಾಂಗ ಸಚಿವರಾಗಿ ಕ್ಯಾಮರಾನ್ ನೇಮಕಗೊಂಡಿದ್ದಾರೆ.
ರಾಜೀನಾಮೆ ನೀಡಿದ ಥೆರೆಸಾ ಕೋಫಿ: ಸೋಮವಾರ ಪ್ರಧಾನಿ ರಿಷಿ ಸುನಕ್ ತಮ್ಮ ಸಚಿವ ಸಂಪುಟದ ಪುನರ್ರಚನೆಗೆ ಮುಂದಾಗುತ್ತಿದ್ದಂತೆಯೇ ಪರಿಸರ ಕಾರ್ಯದರ್ಶಿ(ಸಚಿವೆ) ಥೆರೆಸಾ ಕೋಫಿ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಸರಕಾರದಿಂದ ಹಿಂದೆ ಸರಿಯಲು ಇದು ಸಕಾಲವಾಗಿದೆ ಎಂದವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸುನಾಕ್ಗೂ ಮುನ್ನ ಪ್ರಧಾನಿಯಾಗಿದ್ದ ಲಿಝ್ ಟ್ರುಸ್ ಸರಕಾರದಲ್ಲಿ ಉಪಪ್ರಧಾನಿಯಾಗಿದ್ದ ಥೆರೆಸಾ, ಇದಕ್ಕೂ ಮುನ್ನ ಆರೋಗ್ಯ ಸಚಿವೆ, ಉದ್ಯೋಗ ಮತ್ತು ಪಿಂಚಣಿ ಇಲಾಖೆಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.







