ಪ್ರಾಣಾಪಾಯವಿದ್ದರೂ ಬಾಂಗ್ಲಾದೇಶಕ್ಕೆ ಹಿಂದಿರುಗುವೆ : ಮಾಜಿ ಪ್ರಧಾನಿ ಶೇಖ್ ಹಸೀನಾ

ಶೇಖ್ ಹಸೀನಾ | Photo Credit : PTI
ವಾಶಿಂಗ್ಟನ್, ಜು.29: ತನ್ನ ಜೀವಕ್ಕೆ ಅಪಾಯವಿದೆ ಎಂಬ ಅರಿವಿದ್ದರೂ ಸಹ ಇದೇ ಡಿಸೆಂಬರ್ ವೇಳೆಗೆ ಸ್ವದೇಶವಾದ ಬಾಂಗ್ಲಾದೇಶಕ್ಕೆ ಹಿಂದಿರುಗಲು ನಿರ್ಧರಿಸಿರುವುದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
‘‘ಅವರು ನನ್ನನ್ನು ಕೊಲ್ಲಬಹುದು, ಅಥವಾ ಜೈಲಿಗೆ ಅಟ್ಟಬಹುದು. ನನ್ನ ಭವಿಷ್ಯ ಏನಾಗಬಹುದು ಎಂಬ ಸಂಪೂರ್ಣ ಅರಿವು ನನಗಿದೆ. ಆದರೂ ನನ್ನ ದೇಶದ ಜನರು ನನ್ನನ್ನು ಕರೆಯುತ್ತಿರುವುದರಿಂದ ನಾನು ವಾಪಸ್ ಹೋಗಲು ಬಯಸುತ್ತೇನೆ’’ ಎಂದು 78 ವರ್ಷದ ಹಸೀನಾ ಅವರು ‘ಎಎಫ್ಪಿ’ಗೆ ನೀಡಿದ ಇಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆಗಸ್ಟ್ 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಭಾರಿ ಜನಾಂದೋಲನದ ಬಳಿಕ ಹಸೀನಾ ಅವರ 15 ವರ್ಷಗಳ ಆಡಳಿತ ಅಂತ್ಯಗೊಂಡಿತ್ತು. ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದಾಗ ಅವರು ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಪಲಾಯನ ಮಾಡಿದ್ದರು. ಅವರು ಅಧಿಕಾರ ಉಳಿಸಿಕೊಳ್ಳಲು ನಡೆಸಿದ ದಮನಕಾರಿಯಾದ ಕಠಿಣ ಕ್ರಮಗಳಿಂದಾಗಿ ಸುಮಾರು 1,400 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ನವೆಂಬರ್ನಲ್ಲಿ ಡಾಕಾ ನ್ಯಾಯಾಲಯವು ಹಸೀನಾ ಅವರನ್ನು ಮಾನವೀಯತೆಯ ವಿರುದ್ಧದ ಅಪರಾಧಿ ಎಂದು ಘೋಷಿಸಿ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ಈ ತೀರ್ಪನ್ನು ಹಸೀನಾ ಕಾನೂನಿನ ಮುಖವಾಡ ಧರಿಸಿದ ರಾಜಕೀಯ ಸೇಡು ಎಂದು ಕರೆದಿದ್ದಾರೆ.
ಭಾರತದ ಕಡೆಯಿಂದ ಯಾವುದೇ ಒತ್ತಡವಿಲ್ಲ
ಪ್ರಸಕ್ತ ಭಾರತದಲ್ಲಿ ನೆಲೆಸಿರುವ ಹಸೀನಾ, ತಮ್ಮನ್ನು ಸ್ವದೇಶಕ್ಕೆ ಕಳುಹಿಸಲು ಭಾರತದ ಕಡೆಯಿಂದ ಯಾವುದೇ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಭಾರತದಲ್ಲಿ ಸಂಪೂರ್ಣ ಗೌರವ ಮತ್ತು ಘನತೆಯಿಂದ ಇದ್ದೇನೆ. ಭಾರತೀಯ ಅಧಿಕಾರಿಗಳು ನನ್ನ ಹಸ್ತಾಂತರದ ಬಗ್ಗೆ ನನ್ನೊಂದಿಗೆ ಚರ್ಚಿಸಿಲ್ಲ. ಸ್ವದೇಶಕ್ಕೆ ಹಿಂತಿರುಗಲು ನಾನೇ ಸ್ವತಃ ನಿರ್ಧರಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಫೆಬ್ರವರಿಯಲ್ಲಿ ತಾರೀಕ್ ರಹಮಾನ್ ನೇತೃತ್ವದ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಬಾಂಗ್ಲಾ ನಡುವಿನ ಸಂಬಂಧ ಸುಧಾರಿಸಿದೆ. ಢಾಕಾ ಆಡಳಿತವು ಹಸೀನಾ ಅವರ ಹಸ್ತಾಂತರಕ್ಕೆ ಅಧಿಕೃತವಾಗಿ ಮನವಿ ಮಾಡಿದ್ದು, ಇದನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತ ತಿಳಿಸಿದೆ.
ಕ್ಷಮೆಯಾಚಿಸಲು ನಿರಾಕರಣೆ
ತಮ್ಮ ಆಡಳಿತಾವಧಿಯಲ್ಲಿ ನಡೆದ ಕೊಲೆಗಳು, ವಿರೋಧ ಪಕ್ಷಗಳ ನಿಯಂತ್ರಣ ಮತ್ತು ಚುನಾವಣಾ ಅಕ್ರಮಗಳ ಆರೋಪಗಳನ್ನು ತಳ್ಳಿಹಾಕಿದ ಹಸೀನಾ, ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳ ಬಗ್ಗೆ ತಮಗೆ ಸಹಾನುಭೂತಿ ಇದೆ ಎಂದು ಅವರು ಹೇಳಿದರಾದರೂ, ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.
ವಿದ್ಯಾರ್ಥಿ ಚಳವಳಿಯ ಸಂದರ್ಭದಲ್ಲಿ ಅತಿಯಾದ ಬಲಪ್ರಯೋಗ ಮಾಡಲಾಗಿತ್ತು ಎಂಬ ಆರೋಪವನ್ನು ಕೂಡಾ ಅವರು ನಿರಾಕರಿಸಿದ್ದಾರೆ. ‘‘ನಮ್ಮ ಸರಕಾರ ಅತ್ಯಂತ ತಾಳ್ಮೆಯಿಂದ ಪರಿಸ್ಥಿತಿಯನ್ನು ಶಾಂತಿಯುತವಾಗಿ ಬಗೆಹರಿಸಲು ಯತ್ನಿಸಿತ್ತು. ಆದರೆ ಅದು ಕೇವಲ ವಿದ್ಯಾರ್ಥಿ ಪ್ರತಿಭಟನೆಯಾಗಿರಲಿಲ್ಲ; ಸರಕಾರವನ್ನು ಪತನಗೊಳಿಸಲು ಯೋಜಿತವಾಗಿ ನಡೆಸಿದ ಹಿಂಸಾಚಾರವಾಗಿತ್ತು’’ ಎಂದವರು ಆರೋಪಿಸಿದ್ದಾರೆ.
ಸ್ವದೇಶಕ್ಕೆ ಮರಳಿದ ನಂತರ ಮತ್ತೆ ರಾಜಕೀಯಕ್ಕೆ ಧುಮುಕುತ್ತೀರಾ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಅವರು, ‘‘ಅಧಿಕಾರ ನನ್ನ ಗಮ್ಯಸ್ಥಾನವಲ್ಲ, ಜನಸೇವೆ ಮಾತ್ರ ನನ್ನ ಗುರಿ’’ ಎಂದಿದ್ದಾರೆ.






