ಇರಾನ್ ವಿರುದ್ಧದ ಯುದ್ಧಕ್ಕೆ ಟ್ರಂಪ್ ರ ಮಾಜಿ ಮಿತ್ರರಿಂದಲೇ ವಿರೋಧ; ಮಧ್ಯಪ್ರಾಚ್ಯದಿಂದ ಸೇನೆ ಹಿಂತೆಗೆದುಕೊಳ್ಳುವಂತೆ ಆಗ್ರಹ

Photo credit : aljazeera
ವಾಷಿಂಗ್ಟನ್ : ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ರಾಜಕೀಯ ಮಿತ್ರರಿಂದಲೇ ವಿರೋಧ ವ್ಯಕ್ತವಾಗಿದೆ. ಅಮೆರಿಕದ ಮಾಜಿ ಸೆನೆಟ್ ಸದಸ್ಯೆ ಮಾರ್ಜೋರಿ ಟೇಲರ್ ಗ್ರೀನ್ ಹಾಗೂ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (NCTC) ಮಾಜಿ ನಿರ್ದೇಶಕ ಜೋ ಕೆಂಟ್ ಅವರು ಟ್ರಂಪ್ ಆಡಳಿತದ ಕ್ರಮವನ್ನು ಟೀಕಿಸಿದ್ದು, ಮಧ್ಯಪ್ರಾಚ್ಯದಿಂದ ಅಮೆರಿಕದ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಜೋರ್ಡಾನ್ ನಲ್ಲಿ ಇಬ್ಬರು ಅಮೆರಿಕದ ಸೇನಾ ಸಿಬ್ಬಂದಿ ಮೃತಪಟ್ಟ ಘಟನೆಯನ್ನು ನೆಪವಾಗಿಸಿಕೊಂಡು ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತಿದೆ ಎಂದು ಗ್ರೀನ್ ಆರೋಪಿಸಿದ್ದಾರೆ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಮೃತಪಟ್ಟ ಸೈನಿಕರನ್ನು 'ವೀರರು, ಅವರ ತ್ಯಾಗವು ನಮ್ಮ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ' ಎಂದು ಹೇಳಿದ್ದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಗ್ರೀನ್, ಆ ಸೈನಿಕರು ಅಮೆರಿಕದ ಹಿತಾಸಕ್ತಿಗಾಗಿ ಅಲ್ಲ, ಇಸ್ರೇಲ್ ಪರವಾಗಿ ನಡೆಯುತ್ತಿರುವ ಯುದ್ಧದಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಸಾವುಗಳನ್ನು ಅರ್ಥಹೀನ ಯುದ್ಧವನ್ನು ಮುಂದುವರಿಸಲು ಸಮರ್ಥನೆಯಾಗಿ ಬಳಸಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಜೋ ಕೆಂಟ್ ಅವರು ಅಮೆರಿಕದ ವಾಯುದಾಳಿಗಳು ನಿರೀಕ್ಷಿತ ಫಲ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಭೂ ಕಾರ್ಯಾಚರಣೆ ನಡೆಸಿದರೆ ಅಮೆರಿಕದ ಸೈನಿಕರ ಭಾರೀ ಸಾವುನೋವು ಸಂಭವಿಸುವುದರ ಜೊತೆಗೆ, ಮಧ್ಯಪ್ರಾಚ್ಯ ಪ್ರದೇಶ ಮತ್ತಷ್ಟು ಅಸ್ಥಿರವಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಅಲ್ಲದೆ, ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಬಾ ಅಲಿ ಖಾಮಿನೈ ಅವರನ್ನು ಹತ್ಯೆ ಮಾಡಿದರೆ, ಅದು ಅಲ್ಲಿನ ಸರ್ಕಾರ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪರ ಜನರನ್ನು ಇನ್ನಷ್ಟು ಒಗ್ಗೂಡಿಸುವ ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ಪಡೆಗಳು, ಸೇನಾ ನೆಲೆಗಳು ಮತ್ತು ನೌಕಾಪಡೆಗಳನ್ನು ಹಿಂತೆಗೆದುಕೊಳ್ಳಬೇಕು. ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಇರಾನ್ ಭರವಸೆ ನೀಡಿದರೆ, ಪ್ರತಿಯಾಗಿ ಅಮೆರಿಕವು ನಿರ್ಬಂಧಗಳಲ್ಲಿ ಸಡಿಲಿಕೆ ನೀಡಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.
ಇದೇ ವೇಳೆ, ಇರಾನ್ ನ ದಕ್ಷಿಣ ಕರಾವಳಿಯನ್ನು ಗುರಿಯಾಗಿಸಿಕೊಂಡು ಅಮೆರಿಕದ ವಾಯುದಾಳಿಗಳು ಮತ್ತೊಂದು ರಾತ್ರಿ ಮುಂದುವರಿದಿವೆ. ಆದರೆ, ಕಳೆದ ಎರಡು–ಮೂರು ರಾತ್ರಿಗಳಲ್ಲಿ ನಡೆದ ದಾಳಿಗಳೊಂದಿಗೆ ಹೋಲಿಸಿದರೆ ಈ ಬಾರಿ ದಾಳಿಯ ತೀವ್ರತೆ ತುಸು ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಕಿಶ್ ದ್ವೀಪದ ಆಕಾಶದಲ್ಲಿ ಯುದ್ಧ ವಿಮಾನಗಳ ಘರ್ಜನೆ ಕೇಳಿಬಂದಿದ್ದು, ಹಾರ್ಮುಝ್ ಜಲಸಂಧಿಯ ಸಮೀಪದ ಕಾರ್ಯತಂತ್ರದ ಪ್ರದೇಶವಾದ ಸಿರಿಕ್ ನಗರದಲ್ಲಿ ಸ್ಫೋಟಗಳು ಸಂಭವಿಸಿರುವ ಬಗ್ಗೆ ವರದಿಗಳಾಗಿವೆ. ಪ್ರಮುಖ ಬಂದರು ನಗರವಾದ ಬಂದರ್ ಅಬ್ಬಾಸ್ ನಲ್ಲೂ ಸ್ಫೋಟಗಳು ಸಂಭವಿಸಿರುವ ವರದಿಗಳು ಬಂದಿದೆ. ಕಳೆದ ಎರಡು–ಮೂರು ರಾತ್ರಿಗಳಲ್ಲಿ ಈ ಬಂದರು ನಗರವನ್ನು ಗುರಿಯಾಗಿಸಿಕೊಂಡು ಅಮೆರಿಕ ಭಾರೀ ವಾಯುದಾಳಿಗಳನ್ನು ನಡೆಸಿತ್ತು.






