ಚೀನಾದಲ್ಲಿ ಕೋವಿಡ್ 19 ವೈರಸ್ ಸೋರಿಕೆಯ ಮೂಲ ಬಚ್ಚಿಡಲು ಯತ್ನಿಸಿದ್ದ ಅಮೆರಿಕದ ಮಾಜಿ ವೈದ್ಯಕೀಯ ಸಲಹೆಗಾರ!

ಡಾ. ಆ್ಯಂಟೊನಿಯೊ ಫೌಸಿ | Photo Credit : AP
ಹೊಸದಿಲ್ಲಿ, ಜೂ.19: ಅಮೆರಿಕ ಅಧ್ಯಕ್ಷರ ಮಾಜಿ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆ್ಯಂಟೊನಿಯೊ ಫೌಸಿ ಅವರು ತನ್ನ ಅಧಿಕಾರಾವಧಿಯಲ್ಲಿ ಚೀನಾದ ವುಹಾನ್ ವೈರಾಣುಶಾಸ್ತ್ರ ಸಂಸ್ಥೆ ನಡೆಸುತ್ತಿದ್ದ ಕೋವಿಡ್–19 ವೈರಾಣು ಕುರಿತ ಸಂಶೋಧನಾ ಕಾರ್ಯಗಳಿಗೆ ಅಮೆರಿಕದ ತೆರಿಗೆದಾರರ ಲಕ್ಷಾಂತರ ಡಾಲರ್ ಗಳನ್ನು ಅನುದಾನವಾಗಿ ನೀಡಿದ್ದರು ಹಾಗೂ ಚೀನಾದ ಬೇಹುಗಾರಿಕಾ ಅಧಿಕಾರಿಗಳ ಜೊತೆ ಸಂಪರ್ಕವನ್ನು ಹೊಂದಿದ್ದರು ಎಂದು ಅಮೆರಿಕದ ಗುಪ್ತಚರ ಇಲಾಖೆಯ ನಿರ್ಗಮನ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಆಪಾದಿಸಿದ್ದಾರೆ.
ತುಳಸಿ ಗಬ್ಬಾರ್ಡ್ ಅವರು ಶುಕ್ರವಾರ ಬಹಿರಂಗಪಡಿಸಿದ ತಮ್ಮ ಇಲಾಖೆಯ ಪರಿಷ್ಕೃತವಲ್ಲದ ದಾಖಲೆಯೊಂದರಲ್ಲಿ ಈ ವಿಷಯವನ್ನು ಬಯಲಿಗೆಳೆದಿದ್ದಾರೆ.
ಕೋವಿಡ್–19 ಉಗಮದ ಕುರಿತು ಮಾಹಿತಿಯನ್ನು ಬಚ್ಚಿಡಲು ಫೌಸಿ ಅವರು ಚೀನಿ ಬೇಹುಗಾರಿಕಾ ಅಧಿಕಾರಿಗಳ ಜೊತೆ ಕೆಲಸ ಮಾಡಿದ್ದರು ಮತ್ತು 2024ರಲ್ಲಿ ಈ ಬಗ್ಗೆ ನಡೆದ ವಿಚಾರಣೆ ಸಂದರ್ಭ ಅಮೆರಿಕ ಕಾಂಗ್ರೆಸ್ ಗೆ ತಪ್ಪು ಮಾಹಿತಿಗಳನ್ನು ನೀಡಿದ್ದರು ಎಂದು ಗಬ್ಬಾರ್ಡ್ ಆರೋಪಿಸಿದ್ದಾರೆ.
ವೈರಸ್ನ ಉಗಮ ಹಾಗೂ ಸಂಶೋಧನೆಗೆ ಹಣ ಪೂರೈಕೆ ಮಾಡುವಲ್ಲಿ ತನ್ನ ಪಾತ್ರದ ಕುರಿತ ಮಾಹಿತಿಗಳನ್ನು ಮುಚ್ಚಿಹಾಕಲು ಫೌಸಿ ಅವರು ಬೇಹುಗಾರಿಕಾ ದಳದಲ್ಲಿರುವ ‘ರಾಜಕೀಯ ನಾಯಕತ್ವದ’ ಜೊತೆ ಕೆಲಸ ಮಾಡಿದ್ದರು ಎಂದು ಗಬ್ಬಾರ್ಡ್ ಮಾಹಿತಿ ನೀಡಿದ್ದಾರೆ.
ವುಹಾನ್ ವಿವಿಯ ವೈರಾಣು ಕೇಂದ್ರದಲ್ಲಿ ಸೋರಿಕೆಯಾದ ವೈರಸ್, ಆನಂತರ ಜಗತ್ತಿನಾದ್ಯಂತ ಹರಡಿದ ಕೊರೊನಾ ವೈರಸ್ ಗೆ ಮೂಲವೆಂಬ ಊಹಾಪೋಹಗಳಿಗೆ ಗಬ್ಬಾರ್ಡ್ ಬಹಿರಂಗಪಡಿಸಿದ ಮಾಹಿತಿ ಬಲ ನೀಡಿದೆ. ಇದಕ್ಕೂ ಮುನ್ನ ಚೀನಾವು ವನ್ಯಜೀವಿ ಮಾರುಕಟ್ಟೆಯಿಂದಲೇ ಈ ಸೋಂಕು ಹರಡಿತ್ತೆಂದು ವಾದಿಸಿತ್ತು.
‘‘ಕೋವಿಡ್–19 ಸಾಂಕ್ರಾಮಿಕವು ಲಕ್ಷಾಂತರ ಅಮೆರಿಕನ್ನರಿಗೆ ಹಾಗೂ ಜಗತ್ತಿನಾದ್ಯಂತ ಸಂಕಷ್ಟ ಹಾಗೂ ನೋವನ್ನುಂಟು ಮಾಡಿದೆ. ಹಲವು ವರ್ಷಗಳಿಂದ ಹೇಳುತ್ತಲೇ ಬಂದ ಸುಳ್ಳುಗಳು, ಸೆನ್ಸಾರ್ಶಿಪ್ ಗಳು ಹಾಗೂ ಮರೆಮಾಚುವಿಕೆಗಳ ಆನಂತರ ಅಮೆರಿಕದ ಜನತೆ ಪಾರದರ್ಶಕತೆ, ಸತ್ಯ ಹಾಗೂ ಉತ್ತರದಾಯಿತ್ವವನ್ನು ಕೇಳುತ್ತಿದ್ದಾರೆ’’ ಎಂದು ಗಬ್ಬಾರ್ಡ್ ತಿಳಿಸಿದ್ದಾರೆ.






