Kerala | Abu Dhabiಯಲ್ಲಿ ರಸ್ತೆ ಅಪಘಾತ; ಒಂದೇ ತಾಯಿಯ ನಾಲ್ವರು ಮಕ್ಕಳು ಮೃತ್ಯು

ಮಲಪ್ಪುರಂ: ಅಬುಧಾಬಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಲಪ್ಪುರಂ ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಸಹೋದರರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮನೆಕೆಲಸದ ಮಹಿಳೆಯೂ ಸಾವನ್ನಪ್ಪಿದ್ದು, ಮಕ್ಕಳ ಪೋಷಕರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಲಪ್ಪುರಂ ಜಿಲ್ಲೆಯ ಕಿಝಿಸ್ಸೇರಿ ಪುಲಿಯಕ್ಕೋಡ್ ನಿವಾಸಿಗಳಾದ ಮಲಯನ್ ಅಬ್ದುಲ್ ಲತೀಫ್ ಮತ್ತು ರುಕ್ಸಾನಾ ದಂಪತಿಯ ಮಕ್ಕಳಾದ ಆಶಾಸ್ (14), ಅಮ್ಮರ್ (12), ಅಝಂ(7) ಮತ್ತು ಅಯಾಶ್ (5) ಅವರು ಅಪಘಾತದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಮ್ರವಟ್ಟಂ ಮೂಲದ ಬುಶ್ರಾ ಕೂಡ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಅಬ್ದುಲ್ ಲತೀಫ್ ಮತ್ತು ರುಕ್ಸಾನಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಹೊಸ ವರ್ಷದ ಆಚರಣೆಯ ಭಾಗವಾಗಿ ಅಬುಧಾಬಿಯಲ್ಲಿ ಆಯೋಜಿಸಲಾಗಿದ್ದ ಲಿವಾ ಫೆಸ್ಟ್ ವೀಕ್ಷಿಸಿ ಕುಟುಂಬವು ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. 7 ಸದಸ್ಯರಿದ್ದ ಕುಟುಂಬ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿದೆ ಎನ್ನಲಾಗಿದೆ.
ಐವರು ಮಕ್ಕಳಿದ್ದ ಕುಟುಂಬದಲ್ಲಿ ನಾಲ್ವರು ಮಕ್ಕಳು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಂದೆ–ತಾಯಿ ಹಾಗೂ ಏಕೈಕ ಸಹೋದರಿಯನ್ನು ಈ ಅಪಘಾತದಲ್ಲಿ ಬದುಕುಳಿದ್ದಾರೆ. ಮೃತ ನಾಲ್ವರು ಸಹೋದರರು ಮತ್ತು ಬುಶ್ರಾ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 12.30ಕ್ಕೆ ದುಬೈನ ಸೋನಾಪುರದಲ್ಲಿರುವ ಮಸೀದಿಯಲ್ಲಿ ನೆರವೇರಿಸಲಾಯಿತು ಎಂದು ತಿಳಿದು ಬಂದಿದೆ.







