ಟಿಪ್ಪು ವಂಶಸ್ಥೆ ನೂರ್ ಇನಾಯತ್ ಖಾನ್ ಗೆ ಫ್ರಾನ್ಸ್ ಗೌರವ; ಅಂಚೆ ಚೀಟಿ ಬಿಡುಗಡೆ

ನೂರ್ ಇನಾಯತ್ ಖಾನ್ | PC : PTI \ prajavani.net
ಲಂಡನ್: ಟಿಪ್ಪು ಸುಲ್ತಾನ್ ವಂಶಸ್ಥೆ ಹಾಗೂ ಎರಡನೇ ಮಹಾಯುದ್ಧದ ವೇಳೆ ನಾಝಿಗಳ ವಿರುದ್ಧ ರಹಸ್ಯ ಕಾರ್ಯಾಚರಣೆಯಲ್ಲಿ ಪಾತ್ರವಹಿಸಿದ್ದ ನೂರ್ ಇನಾಯತ್ ಖಾನ್ ಅವರಿಗೆ ಫ್ರಾನ್ಸ್ ಸರ್ಕಾರ ಗೌರವ ಸಲ್ಲಿಸಿದೆ. ಫ್ರೆಂಚ್ ಅಂಚೆ ಸೇವೆ ಲಾ ಪೋಸ್ತೆ ನೂರ್ ಅವರ ಚಿತ್ರ ಹೊಂದಿದ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದು, ಈ ಗೌರವಕ್ಕೆ ಪಾತ್ರರಾದ ಭಾರತ ಮೂಲದ ಏಕೈಕ ಮಹಿಳೆ ಅವರಾಗಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎರಡನೇ ಮಹಾಯುದ್ಧದ 80 ವರ್ಷಾಚರಣೆ ಅಂಗವಾಗಿ ನಾಝಿ ವಿರೋಧಿ ಹೋರಾಟದಲ್ಲಿ ಹೆಸರಾಗಿದ್ದ 12 ವೀರರು ಮತ್ತು ನಾಯಕಿಯರ ಗೌರವಾರ್ಥವಾಗಿ ಅಂಚೆ ಚೀಟಿ ಸರಣಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ನೂರ್ ಅವರನ್ನೂ ಸೇರಿಸಲಾಗಿದೆ. ಬ್ರಿಟನ್ ವಿಶೇಷ ಕಾರ್ಯಾಚರಣೆ ವಿಭಾಗ (SOE) ಗೆ ರಹಸ್ಯ ಪ್ರತಿನಿಧಿಯಾಗಿ ನೂರ್ ಫ್ರಾನ್ಸ್ ಪರ ಕಾರ್ಯ ನಿರ್ವಹಿಸಿದ್ದು, ಗುಪ್ತ ಸಂವಹನ ಜಾಲ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ನಾಝಿಗಳಿಂದ ಬಂಧನಕ್ಕೆ ಒಳಗಾಗಿ ಹುತಾತ್ಮರಾದರು.
‘ಫ್ರಾನ್ಸ್ ಸರ್ಕಾರ ನೂರ್ ಇನಾಯತ್ ಖಾನ್ ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ’ ಎಂದು ನೂರ್ ಅವರ ಜೀವನ ಚರಿತ್ರೆ ‘ಸ್ಪೈ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್’ ಕೃತಿಯ ಲೇಖಕಿ ಶ್ರಬಾನಿ ಬಸು ಪ್ರತಿಕ್ರಿಯಿಸಿದ್ದಾರೆ. ‘ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ಮಹಿಳೆಯ ಮುಖ ಫ್ರಾನ್ಸ್ ನಲ್ಲಿ ಸಾಮಾನ್ಯರು ಬಳಸುವ ಅಂಚೆ ಚೀಟಿಯಲ್ಲಿ ಕಾಣಿಸಿಕೊಳ್ಳುವುದು ಅದ್ಭುತ’ ಎಂದು ಅವರು ಹೇಳಿದ್ದಾರೆ.





