France | 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ

ಸಾಂದರ್ಭಿಕ ಚಿತ್ರ (AI)
ಪ್ಯಾರಿಸ್, ಜು.21: ಹದಿನೈದು ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವ ಮಸೂದೆಗೆ ಫ್ರಾನ್ಸ್ ಸಂಸತ್ ಸೋಮವಾರ ಅನುಮೋದನೆಯನ್ನು ನೀಡಿದೆ. ಸಾಮಾಜಿಕ ಮಾಧ್ಯಮವನ್ನು ಮಕ್ಕಳ ಬಳಕೆಗೆ ನಿರ್ಬಂಧಿಸುವ ಜೊತೆಗೆ ಹೈಸ್ಕೂಲ್ಗಳಲ್ಲಿ ಸ್ಮಾರ್ಟ್ಫೋನ್ ಬಳಕೆಯನ್ನು ಕೂಡ ಈ ಮಸೂದೆಯು ನಿಷೇಧಿಸುತ್ತದೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಸಾಮಾಜಿಕ ಮಾಧ್ಯಮಗಳನ್ನು ಮಕ್ಕಳಿಗೆ ನಿಷೇಧಿಸುವ ಹಾಗೂ ಅಪ್ರಾಪ್ತ ವಯಸ್ಕರು ಹಾಗೂ ವಿದ್ಯಾರ್ಥಿಗಳು ಮೊಬೈಲ್ ಫೋನ್ಗಳಲ್ಲಿ ಸಮಯವನ್ನು ಕಳೆಯುವುದನ್ನು ಕಡಿಮೆಗೊಳಿಸುವುದರ ಕುರಿತಾದ ಬಲವಾದ ಪ್ರತಿಪಾದಕರಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳ ಸಂಪರ್ಕವನ್ನು ಮಕ್ಕಳಿಗೆ ನಿರ್ಬಂಧಿಸುವುದನ್ನು ಯುರೋಪ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವೊನ್ ಡೆರ್ ಲೆಯೆನ್ ಕೂಡ ಬೆಂಬಲಿಸಿದ್ದಾರೆ .
ಆಸ್ಟ್ರೇಲಿಯವು ಹದಿನಾರು ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ ಮೊತ್ತ ಮೊದಲ ರಾಷ್ಟ್ರವಾಗಿದ್ದು, ಕಳೆದ ಡಿಸೆಂಬರ್ನಲ್ಲಿ ಅದು ಈ ಕುರಿತಾಗಿ ಮಸೂದೆಯೊಂದನ್ನು ಜಾರಿಗೆ ತಂದಿತ್ತು.




