ಅಮೆರಿಕಾದ ವಿರೋಧದ ಹೊರತಾಗಿಯೂ ಜಿ20 ಶೃಂಗಸಭೆಯಲ್ಲಿ ನಿರ್ಣಯ ಅಂಗೀಕಾರ

Photo Credit : AP \ PTI
ಜೊಹಾನ್ಸ್ ಬರ್ಗ್, ನ.22: ಅಮೆರಿಕಾದ ವಿರೋಧದ ಹೊರತಾಗಿಯೂ ಜಿ20 ಗುಂಪಿನ ಜಾಗತಿಕ ನಾಯಕರು ಜಿ20 ಶೃಂಗಸಭೆಯ ಪ್ರಾರಂಭದಲ್ಲಿ ಘೋಷಣೆಯನ್ನು ಅಂಗೀಕರಿಸಿದ್ದಾರೆ.
ದಕ್ಷಿಣ ಆಫ್ರಿಕಾದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕಾ ಶೃಂಗಸಭೆಯನ್ನು ಬಹಿಷ್ಕರಿಸಿದೆ. `ಸಾಮಾನ್ಯವಾಗಿ ಘೋಷಣೆಯನ್ನು ಶೃಂಗಸಭೆಯ ಅಂತ್ಯದಲ್ಲಿ ಅಂಗೀಕರಿಸಲಾಗುತ್ತದೆ. ಆದರೆ ಶೃಂಗಸಭೆಯ ಘೋಷಣೆಯನ್ನು ಶೃಂಗಸಭೆಯ ಮೊದಲ ದಿನದಂದು ಪ್ರಥಮವಾಗಿ ಅಂಗೀಕರಿಸಬೇಕೆಂದು ನಾವು ಬಯಸಿದ್ದೆವು. ಇದಕ್ಕೆ ಸರ್ವಾನುಮತದ ಬೆಂಬಲ ದೊರಕಿದೆ' ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷರ ವಕ್ತಾರ ವಿನ್ಸೆಂಟ್ ಮಗ್ವೆನ್ಯಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಮೆರಿಕಾ ನಿಯೋಗದ ಗೈರು ಹಾಜರಿಯಲ್ಲಿ ನಾಯಕರ ಘೋಷಣೆಯನ್ನು ಅಂಗೀಕರಿಸದಂತೆ ಟ್ರಂಪ್ ಆಡಳಿತವು ದಕ್ಷಿಣ ಆಫ್ರಿಕಾದ ಮೇಲೆ ಒತ್ತಡ ಹೇರಿತ್ತು. ಆದರೂ ನಿರ್ಣಯ ಅಂಗೀಕಾರಗೊಂಡಿರುವುದು ಆಫ್ರಿಕಾ ಖಂಡದಲ್ಲಿ ನಡೆದ ಮೊದಲ ಜಿ20 ಶೃಂಗಸಭೆಗೆ ದೊರೆತ ಗೆಲುವಾಗಿದೆ ಎಂದು ದ.ಆಫ್ರಿಕಾದ ಮೂಲಗಳು ಹೇಳಿವೆ. ಜಿ20 ವಾಸ್ತವದಲ್ಲಿ 19 ರಾಷ್ಟ್ರಗಳು, ಯುರೋಪಿಯನ್ ಯೂನಿಯನ್ ಮತ್ತು ಆಫ್ರಿಕನ್ ಯೂನಿಯನ್ ಸೇರಿದಂತೆ 21 ಸದಸ್ಯರ ಗುಂಪಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಲು ಶ್ರೀಮಂತ ಮತ್ತು ಬಡ ರಾಷ್ಟ್ರಗಳ ನಡುವಿನ ಸೇತುವೆಯಾಗಿ 1999ರಲ್ಲಿ ಜಿ20 ರಚನೆಯಾಗಿದೆ. ಆದರೆ ಇದು ಕೆಲವೊಮ್ಮೆ 7 ಶ್ರೀಮಂತ ರಾಷ್ಟ್ರಗಳ ನೆರಳಿನಲ್ಲಿ ಕಾರ್ಯನಿರ್ವಹಿಸಿದೆ. ಜಿ20 ಸದಸ್ಯರು ಒಟ್ಟಾಗಿ ಜಾಗತಿಕ ಆರ್ಥಿಕತೆಯ ಸುಮಾರು 85%, ಅಂತಾರಾಷ್ಟ್ರೀಯ ವ್ಯಾಪಾರದ 75%ವನ್ನು ಪ್ರತಿನಿಧಿಸುತ್ತಾರೆ. ವಿಭಿನ್ನ ಹಿತಾಸಕ್ತಿಯನ್ನು ಹೊಂದಿರುವ ಅಮೆರಿಕಾ, ರಶ್ಯ, ಚೀನಾ, ಭಾರತ, ಜಪಾನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ಇಂಡೊನೇಶ್ಯಾ, ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ ಇತ್ಯಾದಿ ರಾಷ್ಟ್ರಗಳನ್ನು ಹೊಂದಿರುವ ಜಿ20 ಒಮ್ಮತದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ.







