ಲೆಬನಾನ್ನಲ್ಲಿ ಕದನ ವಿರಾಮಕ್ಕೆ ಜಿ7 ನಾಯಕರ ಒತ್ತಾಯ : ಇರಾನ್ ಒಪ್ಪಂದಕ್ಕೆ ಸ್ವಾಗತ

Photo Credit : PTI
ಪ್ಯಾರಿಸ್, ಜೂ.17: ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸಲು ಮಾಡಿಕೊಳ್ಳಲಾದ ಮಧ್ಯಂತರ ಒಪ್ಪಂದವನ್ನು ಜಿ7 ದೇಶಗಳ ನಾಯಕರು ಬುಧವಾರ ಸ್ವಾಗತಿಸಿದ್ದು ಲೆಬನಾನ್ನಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ಸ್ವಿಟ್ಜರ್ಲೆಂಡ್ ಗಡಿಯ ಸಮೀಪವಿರುವ ಫ್ರಾನ್ಸ್ನ ಎವಿಯನ್-ಲೆಸ್-ಬೈನ್ಸ್ ನಗರದಲ್ಲಿ ಜಿ7 ಶೃಂಗಸಭೆ ನಡೆಯುತ್ತಿದೆ. ತಮ್ಮ ಜಂಟಿ ಹೇಳಿಕೆಯಲ್ಲಿ ಜಿ7 ನಾಯಕರು ಲೆಬನಾನ್ನಲ್ಲಿ `ತಕ್ಷಣದ ಮತ್ತು ದೃಢವಾದ ಕದನ ವಿರಾಮ' ಹಾಗೂ ಹಿಜ್ಬುಲ್ಲಾ ಸಂಘಟನೆಯ ನಿಶ್ಯಸ್ತ್ರೀಕರಣಕ್ಕೆ ಕರೆ ನೀಡಿದ್ದಾರೆ. ಹಾರ್ಮುಝ್ ಜಲಸಂಧಿಯ ಮೇಲಿನ ಜಾಗತಿಕ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಇಂಧನ ದಾಸ್ತಾನುಗಳನ್ನು ಹೆಚ್ಚಿಸಲು ಇಂಧನ ಪೂರೈಕೆ ಮಾರ್ಗಗಳ ವೈವಿಧ್ಯೀಕರಣವನ್ನು ವೇಗಗೊಳಿಸಲು ಬದ್ಧರಾಗಿರುವುದಾಗಿ ಅವರು ಘೋಷಿಸಿದ್ದಾರೆ.
ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಇರಾನ್ನಿಂದ ಎದುರಾಗುವ ಬೆದರಿಕೆಗಳನ್ನು ನಿವಾರಿಸಲು ಹಾಗೂ ಇರಾನ್ ಎಂದಿಗೂ ಪರಮಾಣು ಅಸ್ತ್ರವನ್ನು ಹೊಂದದಂತೆ ನೋಡಿಕೊಳ್ಳಲು ಮಾತುಕತೆಯ ಅಗತ್ಯವನ್ನು ಒತ್ತಿಹೇಳಿದ್ದು, ಶುಕ್ರವಾರದಂದು ಹಾರ್ಮುಝ್ ಜಲಸಂಧಿಯು ನಿರೀಕ್ಷೆಯಂತೆ ಪುನಃ ಮುಕ್ತಗೊಂಡ ನಂತರ, ಅಲ್ಲಿ ಹಡಗುಗಳ ಸಂಚಾರಕ್ಕೆ ರಕ್ಷಣೆ ನೀಡಲು ಬ್ರಿಟನ್ ಮತ್ತು ಫ್ರಾನ್ಸ್ ನೇತೃತ್ವದ ಒಕ್ಕೂಟವು ಸಹಾಯ ಮಾಡಲಿದ್ದು, ಈ ಒಪ್ಪಂದದ ಅನುಷ್ಠಾನಕ್ಕೆ ತಾವೂ ಕೊಡುಗೆ ನೀಡಲು ಸಿದ್ಧರಾಗಿರುವುದಾಗಿ ಜಿ7 ನಾಯಕರು ಹೇಳಿದ್ದಾರೆ.
ಉಕ್ರೇನ್ನ ಪ್ರಾದೇಶಿಕ ಸಮಗ್ರತೆಯನ್ನು ಒಳಗೊಂಡಂತೆ ಆ ದೇಶವನ್ನು ಬೆಂಬಲಿಸಲು ಮತ್ತು ರಷ್ಯಾ ಮೇಲಿನ ನಿರ್ಬಂಧಗಳನ್ನು ಇನ್ನಷ್ಟು ಹೆಚ್ಚಿಸಲು ಜಿ7 ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಈ ಶೃಂಗಸಭೆಯು ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಇರಾನ್ ಜೊತೆಗಿನ ತಮ್ಮ ಒಪ್ಪಂದವನ್ನು ಪ್ರಮುಖ ಮಿತ್ರರಾಷ್ಟ್ರಗಳಾದ ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳ ಮುಂದೆ ಮಂಡಿಸಲು ಉತ್ತಮ ಅವಕಾಶವನ್ನು ಒದಗಿಸಿದೆ.






