G7 ಫೋಟೊ ವಿವಾದ | ಮೆಲೋನಿಗೆ ತಿರುಗೇಟು ನೀಡಿದ ಟ್ರಂಪ್; ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ ಅಮೆರಿಕ ಅಧ್ಯಕ್ಷ

Photo Credit: ANI
ವಾಷಿಂಗ್ಟನ್, ಜೂ.20: G7 ಶೃಂಗಸಭೆಯಲ್ಲಿ ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಪದೇ ಪದೇ ಬೇಡಿಕೊಂಡಿದ್ದರು ಎಂಬ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಟ್ರಂಪ್ ಅವರ ಈ ಹೇಳಿಕೆಗೆ ಮೆಲೋನಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರು ಮತ್ತೆ ಅದೇ ಆರೋಪವನ್ನು ಮುಂದಿಟ್ಟಿದ್ದಾರೆ.
ಈ ಕುರಿತು ‘ಟ್ರೂತ್ ಸೋಶಿಯಲ್’ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಜಾರ್ಜಿಯಾ ಮೆಲೋನಿ ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳುವಂತೆ ನನ್ನನ್ನು ಹಲವು ಬಾರಿ ಬೇಡಿಕೊಂಡಿದ್ದರು’ ಎಂದು ಹೇಳಿದ್ದಾರೆ.
ಅಲ್ಲದೆ, ‘ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದದಂತೆ ತಡೆಯುವ ಅಮೆರಿಕದ ಪ್ರಯತ್ನಗಳಿಗೆ ಜಾರ್ಜಿಯಾ ಮೆಲೋನಿ ಬೆಂಬಲ ನೀಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.
ಇರಾನ್ನಲ್ಲಿ ನಡೆಯುತ್ತಿರುವ ಅಮೆರಿಕದ ಸೇನಾ ಕಾರ್ಯಾಚರಣೆಗಳಿಗೆ ಇಟಲಿಯ ವಾಯುನೆಲೆಗಳ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ನಿರಾಕರಿಸುವ ಮೂಲಕ ಮೆಲೋನಿ ಅಮೆರಿಕಕ್ಕೆ ಗಂಭೀರ ಸಾಗಾಟ ಹಾಗೂ ಕಾರ್ಯಾಚರಣಾ ತೊಂದರೆ ಉಂಟುಮಾಡಿದ್ದಾರೆ ಎಂದೂ ಅವರು ದೂರಿದ್ದಾರೆ.
ಇದಕ್ಕೂ ಮುನ್ನ, ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳುವಂತೆ ತಾವು ಡೊನಾಲ್ಡ್ ಟ್ರಂಪ್ ಅವರನ್ನು ಬೇಡಿಕೊಂಡಿದ್ದೇವೆ ಎಂಬ ಅವರ ಹೇಳಿಕೆಯಿಂದ ದಿಗ್ಭ್ರಾಂತಿಗೊಳಗಾಗಿದ್ದೇನೆ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹೇಳಿಕೆಯ ಮರುದಿನವೇ ‘ಟ್ರೂತ್ ಸೋಶಿಯಲ್’ನಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ಟ್ರಂಪ್, ‘ಇಟಲಿಯಲ್ಲಿ ಜಾರ್ಜಿಯಾ ಮೆಲೋನಿಯ ಜನಪ್ರಿಯತೆ ತಳಮಟ್ಟಕ್ಕೆ ಕುಸಿದಿದೆ’ ಎಂದು ಲೇವಡಿ ಮಾಡಿದ್ದಾರೆ.
ಇರಾನ್ ಮೇಲೆ ಅಮೆರಿಕ ಸೇನಾ ಕಾರ್ಯಾಚರಣೆ ಆರಂಭವಾದ ಬಳಿಕ ಟ್ರಂಪ್ ಮತ್ತು ಮೆಲೋನಿ ನಡುವಿನ ವಾಕ್ಸಮರ ನಿರಂತರವಾಗಿ ಮುಂದುವರಿದಿದ್ದು, ಇದು ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಉಂಟಾಗುತ್ತಿರುವ ಬಿಕ್ಕಟ್ಟಿನ ಸೂಚನೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕುರಿತು ಟ್ರಂಪ್ ನೀಡಿದ ಹೇಳಿಕೆಗಳ ಬೆನ್ನಲ್ಲೇ, ಇಟಲಿ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಅವರು ಮುಂದಿನ ವಾರ ಕೈಗೊಳ್ಳಬೇಕಿದ್ದ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.






