ವಿವೇಕಯುತ ರಾಷ್ಟ್ರವು ‘ಹವ್ಯಾಸ’ಕ್ಕಾಗಿ ಮಕ್ಕಳನ್ನು ಕೊಲ್ಲದು: ಗಾಝಾದಲ್ಲಿ ಇಸ್ರೇಲ್ನ ನರಮೇಧಕ್ಕೆ ವಿಪಕ್ಷ ನಾಯಕ ಗೋಲಾನ್ ಖಂಡನೆ

PC : aljazeera.com
ಜೆರುಸಲೇಂ: ಗಾಝಾದ ಮೇಲೆ ಇಸ್ರೇಲ್ ನ ನಿರಂತರವಾಗಿ ಆಕ್ರಮಣ ನಡೆಸಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಜನರ ಮಾರಣಹೋಮ ನಡೆಸುತ್ತಿರುವುದನ್ನು ಇಸ್ರೇಲಿನ ಎಡಪಂಥೀಯ ರಾಜಕಾರಣಿ ಯಾಯಿರ್ ಗೋಲನ್ ತೀವ್ರವಾಗಿ ಖಂಡಿಸಿದ್ದಾರೆ.
ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು,‘‘ಒಂದು ವೇಳೆ ಇಸ್ರೇಲ್ ವಿವೇಕಶಾಲಿ ರಾಷ್ಟ್ರದಂತೆ ವರ್ತಿಸದೆ ಇದ್ದಲ್ಲಿ, ಹಿಂದಿನ ದಕ್ಷಿಣ ಆಫ್ರಿಕದ ಹಾಗೆ ಅದು ಇತರ ದೇಶಗಳ ನಡುವೆ ಅಸ್ಪಶ್ಯ ರಾಷ್ಟ್ರವಾಗುವ ಹಾದಿಯಲ್ಲಿದೆ’’ ಎಂದರು.
‘‘ಯಾವುದೇ ವಿವೇಕಯುತ ರಾಷ್ಟ್ರವು ನಾಗರಿಕರ ವಿರುದ್ಧ ಯುದ್ಧವನ್ನು ಸಾರುವುದಿಲ್ಲ, ಹವ್ಯಾಸಕ್ಕಾಗಿ ಶಿಶುಗಳನ್ನು ಕೊಲ್ಲುವುದಿಲ್ಲ ಹಾಗೂ ಜನರನ್ನು ಸ್ಥಳದಿಂದ ಉಚ್ಚಾಟಿಸುವುದಕ್ಕೆ ಅದು ಗುರಿಗಳನ್ನು ನಿಗದಿಪಡಿಸುವುದಿಲ್ಲ’’ ಎಂದು ಡೆಮಾಕ್ರಾಟಿಕ್ ಪಕ್ಷದ ನಾಯಕರೂ ಆದ ಗೋಲಾನ್ ಕಾನ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಗೋಲಾನ್ ಹೇಳಿಕೆಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಖಂಡಿಸಿದ್ದಾರೆ. ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷರ ಹೇಳಿಕೆಯು ಸೇನಾಪಡೆಗಳ ವಿರುದ್ಧ ಜನರನ್ನು ಪ್ರಚೋದಿಸುವಂತಿದೆ ಎಂದವರು ಹೇಳಿದ್ದಾರೆ.





