ಗಾಝಾ| ಆಹಾರ ಪಡೆಯಲು ನೂಕುನುಗ್ಗಲು: ಗುಂಡೇಟಿಗೆ ಒಬ್ಬ ಬಲಿ; 47 ಮಂದಿಗೆ ಗಾಯ
►ಇಸ್ರೇಲ್ ಮಿಲಿಟರಿ ಗುಂಡು ಹಾರಿಸಿರುವ ಸಾಧ್ಯತೆ: ವಿಶ್ವಸಂಸ್ಥೆ ►ಕೆಲ ಕ್ಷಣ ನಿಯಂತ್ರಣ ತಪ್ಪಿತ್ತು: ನೆತನ್ಯಾಹು

ಸಾಂದರ್ಭಿಕ ಚಿತ್ರ | PC : PTI
ಗಾಝಾ: ಗಾಝಾದಲ್ಲಿ ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಪ್ರತಿಷ್ಠಾನವು ಸ್ಥಾಪಿಸಿದ್ದ ನೆರವು ವಿತರಣಾ ಕೇಂದ್ರದಲ್ಲಿ ಆಹಾರ ಪಡೆಯಲು ಜನರ ಗುಂಪು ಒಮ್ಮೆಲೇ ಮುಗಿಬಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಫೆಲೆಸ್ತೀನಿಯನ್ ಸಾವನ್ನಪ್ಪಿದ್ದು ಇತರ 47 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಬುಧವಾರ ವರದಿಮಾಡಿದೆ.
ದಕ್ಷಿಣ ಗಾಝಾದ ರಫಾ ನಗರದ ಹೊರವಲಯದಲ್ಲಿ ಗಾಝಾ ಹ್ಯುಮಾನಿಟೇರಿಯನ್ ಫೌಂಡೇಷನ್(ಜಿಎಚ್ಎಫ್) ನೆರವು ವಿತರಣಾ ಕೇಂದ್ರವನ್ನು ಸೋಮವಾರ ತೆರೆದಿದೆ. ಜನರ ನೂಕುನುಗ್ಗಲು ತಪ್ಪಿಸಲು ಕೇಂದ್ರದ ಸುತ್ತ ತಡೆಬೇಲಿ ನಿರ್ಮಿಸಲಾಗಿತ್ತು. ಏಕಾಏಕಿ ಸಾವಿರಾರು ಜನರ ಗುಂಪು ತಡೆಬೇಲಿ ಮುರಿದು ನೆರವು ಪಡೆಯಲು ಮುನ್ನುಗ್ಗಿದಾಗ ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ವಿಫಲವಾದರು. ಆಗ ಇಸ್ರೇಲ್ ಟ್ಯಾಂಕ್ ಗಳು ಮತ್ತು ಇಸ್ರೇಲ್ ಸೇನೆಯ ಹೆಲಿಕಾಪ್ಟರ್ ಗಳು ಗುಂಡು ಹಾರಿಸಿದವು ಎಂದು `ಅಸೋಸಿಯೇಟೆಡ್ ಪ್ರೆಸ್' ಪತ್ರಕರ್ತರು ಹೇಳಿದ್ದಾರೆ. ತನ್ನ ಭದ್ರತಾ ಪಡೆಗಳು ಗುಂಡು ಹಾರಿಸಿಲ್ಲ ಎಂದು ಜಿಎಚ್ಎಫ್ ಹೇಳಿದೆ. ಸಮೀಪದಲ್ಲಿಯೇ ಇದ್ದ ತನ್ನ ಪಡೆಗಳು `ಎಚ್ಚರಿಕೆಯ ಗುಂಡು' ಹಾರಿಸಿವೆ. ಆದರೆ ಜನರತ್ತ ಗುಂಡು ಹಾರಿಸಿಲ್ಲ ಎಂದು ಇಸ್ರೇಲ್ ಹೇಳಿದೆ.
ಇಸ್ರೇಲ್ ಸೇನೆ ಗುಂಡು ಹಾರಿಸಿರುವುದು ಸಾವು-ನೋವಿಗೆ ಕಾರಣವಾಗಿರುವಂತೆ ಕಾಣುತ್ತದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿಯ ಫೆಲೆಸ್ತೀನ್ ಪ್ರಾಂತ್ಯ ವಿಭಾಗದ ಮುಖ್ಯಸ್ಥ ಅಜಿತ್ ಸುಂಗೇ ಜಿನೆವಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸುಮಾರು 3 ತಿಂಗಳಿಂದ ಗಾಝಾಕ್ಕೆ ನೆರವು ಪೂರೈಕೆಗೆ ಇಸ್ರೇಲ್ ದಿಗ್ಬಂಧನ ವಿಧಿಸಿದ್ದರಿಂದ ಫೆಲೆಸ್ತೀನೀಯರು ಆಹಾರಕ್ಕಾಗಿ ಹತಾಶರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಆಹಾರವನ್ನು ವಿತರಿಸುವ ಅಪಾಯಗಳಿಗೆ ಈ ಘಟನೆಯು ಸ್ಪಷ್ಟ ಉದಾಹರಣೆಯಾಗಿದೆ. ಹೊಸ ವ್ಯವಸ್ಥೆಯು ಜನರನ್ನು ಸಾವು-ನೋವಿನ ಅಪಾಯಕ್ಕೆ ಒಡ್ಡುತ್ತದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ರಫಾ ನಗರದಲ್ಲಿ ನಾಲ್ಕು ಕೇಂದ್ರಗಳನ್ನು ಸ್ಥಾಪಿಸಿದ್ದು ಇದರಲ್ಲಿ 2 ಕಾರ್ಯಾರಂಭ ಮಾಡಿದೆ. ಇದರ ಭದ್ರತೆಯನ್ನು ಖಾಸಗಿ ಭದ್ರತಾ ಗುತ್ತಿಗೆದಾರರಿಗೆ ವಹಿಸಲಾಗಿದ್ದು ಕೇಂದ್ರದ ಸುತ್ತ ಮುಳ್ಳುತಂತಿಯ ಬೇಲಿ ನಿರ್ಮಿಸಲಾಗಿದೆ. ಸಮೀಪದಲ್ಲಿರುವ `ಮೊರಾಗ್ ಕಾರಿಡಾರ್'ನಲ್ಲಿ ಇಸ್ರೇಲ್ ಪಡೆಗಳು ನಿಯೋಜನೆಗೊಂಡಿವೆ. 4,62,000 ಆಹಾರ ಪ್ಯಾಕೆಟ್ಗ ಳನ್ನು ಒಳಗೊಂಡ ಸುಮಾರು 8,000 ಆಹಾರದ ಪೆಟ್ಟಿಗೆಗಳನ್ನು ಇದುವರೆಗೆ ವಿತರಿಸಲಾಗಿದೆ ಎಂದು ಜಿಎಚ್ಎಫ್ ಮಂಗಳವಾರ ಹೇಳಿದೆ. ವಿಶ್ವಸಂಸ್ಥೆ ಹಾಗೂ ಇತರ ಮಾನವೀಯ ಸಂಸ್ಥೆಗಳು ಹೊಸ ವ್ಯವಸ್ಥೆಯನ್ನು ತಿರಸ್ಕರಿಸಿದ್ದು ಇದು ಗಾಝಾದ 2.3 ದಶಲಕ್ಷ ಜನತೆಯ ಅಗತ್ಯಗಳನ್ನು ಪೂರೈಸುವುದಿಲ್ಲ ಮತ್ತು ಆಹಾರವನ್ನು ಬಳಸಿ ಜನಸಮುದಾಯವನ್ನು ನಿಯಂತ್ರಿಸಲು ಇಸ್ರೇಲ್ ಗೆ ಅವಕಾಶ ಮಾಡಿಕೊಡುತ್ತದೆ ಎಂದು ಟೀಕಿಸಿವೆ. ನೆರವು ಬಯಸುವ ಜನರು ಹಾಗೂ ಇಸ್ರೇಲಿ ಪಡೆಗಳ ನಡುವೆ ಘರ್ಷಣೆಯ ಬಗ್ಗೆಯೂ ಎಚ್ಚರಿಕೆ ನೀಡಿವೆ.
►ಕೆಲ ಕ್ಷಣ ನಿಯಂತ್ರಣ ತಪ್ಪಿತ್ತು: ನೆತನ್ಯಾಹು
ವಿತರಣಾ ಕೇಂದ್ರದಲ್ಲಿ ಕೆಲ ಕ್ಷಣ ನಿಯಂತ್ರಣ ತಪ್ಪಿಹೋಗಿತ್ತು. ಆದರೆ ಮತ್ತೆ ನಿಯಂತ್ರಣಕ್ಕೆ ತರಲು ಯಶಸ್ವಿಯಾಗಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಗಾಝಾದ ಸಂಪೂರ್ಣ ಜನಸಂಖ್ಯೆಯನ್ನು ದಕ್ಷಿಣದ ತುದಿಯಲ್ಲಿನ ಪ್ರದೇಶಕ್ಕೆ ಸ್ಥಳಾಂತರಿಸಲು ಇಸ್ರೇಲ್ ಯೋಜಿಸಿದೆ. ಜೊತೆಗೆ, ಸ್ವಯಂಪ್ರೇರಿತ ವಲಸೆಯ ವ್ಯವಸ್ಥೆಯ ಮೂಲಕ ಗಾಝಾದ ಹೆಚ್ಚಿನ ಜನಸಂಖ್ಯೆಯನ್ನು ಇತರ ದೇಶಗಳಿಗೆ ಸ್ಥಳಾಂತರಿಸಲಾಗುವುದು ಎಂದು ನೆತನ್ಯಾಹು ಪುನರುಚ್ಚರಿಸಿದ್ದಾರೆ.







