ವ್ಯಾಪಾರಿಗಳ ಮೂಲಕ ಗಾಝಾಕ್ಕೆ ಸರಕುಗಳ ಪ್ರವೇಶಕ್ಕೆ ಅನುಮತಿ: ಇಸ್ರೇಲ್

PC : X
ಜೆರುಸಲೇಂ, ಆ.5: ಸ್ಥಳೀಯ ವ್ಯಾಪಾರಿಗಳ ಮೂಲಕ ಗಾಝಾಕ್ಕೆ ನಿಯಂತ್ರಿತ ಸರಕುಗಳ ಪ್ರವೇಶವನ್ನು ಅನುಮತಿಸುವುದಾಗಿ ಇಸ್ರೇಲ್ ಮಂಗಳವಾರ ಹೇಳಿದೆ.
ಮಾನವೀಯ ನೆರವಿನ ವ್ಯಾಪ್ತಿಯನ್ನು ವಿಸ್ತರಿಸಲು ಕ್ಯಾಬಿನೆಟ್ ಒಂದು ಕಾರ್ಯವಿಧಾನವನ್ನು ಅನುಮೋದಿಸಿದೆ. ಇದು ಖಾಸಗಿ ವಲಯದ ಮೂಲಕ ಗಾಝಾಕ್ಕೆ ಸರಬರಾಜು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಅನುಮೋದಿತ ಸರಕುಗಳಲ್ಲಿ ಮೂಲ ಆಹಾರ ಉತ್ಪನ್ನಗಳು, ಶಿಶುಗಳ ಆಹಾರ, ಹಣ್ಣು, ತರಕಾರಿ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು ಸೇರಿವೆ. ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಂದ ನೆರವು ಸಂಗ್ರಹದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ ಗಾಝಾ ಪಟ್ಟಿಗೆ ಪ್ರವೇಶಿಸುವ ನೆರವಿನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದ ಕ್ರಮ ಇದಾಗಿದೆ ' ಎಂದು ಗಾಝಾ ಪ್ರಾಂತಗಳಲ್ಲಿನ ಇಸ್ರೇಲ್ ಸರ್ಕಾರಿ ಚಟುವಟಿಕೆಗಳ ಸಂಯೋಜಕ ಸಂಸ್ಥೆ `ಕೊಗಾಟ್' ಹೇಳಿದೆ.
ಮಾನವೀಯ ಅಗತ್ಯಗಳನ್ನು ಪೂರೈಸಲು ಗಾಝಾ ಪ್ರದೇಶಕ್ಕೆ ಪ್ರತೀ ದಿನ 600 ಟ್ರಕ್ಗಳಷ್ಟು ನೆರವು ಅಗತ್ಯವಿದೆ ಎಂದು ಫೆಲೆಸ್ತೀನಿಯನ್ ಮತ್ತು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಇಸ್ರೇಲ್ ಸೇನೆ ಗಾಝಾದಲ್ಲಿ ಹಮಾಸ್ ನ ಸೋಲನ್ನು ಸಂಪೂರ್ಣಗೊಳಿಸಬೇಕು. ನಮ್ಮ ಎಲ್ಲಾ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಮತ್ತು ಗಾಝಾವು ಇನ್ನು ಮುಂದೆ ಇಸ್ರೇಲ್ ಗೆ ಬೆದರಿಕೆಯಾಗಿ ಉಳಿಯುವುದಿಲ್ಲ ಎಂಬುದನ್ನು ಖಾತರಿಪಡಿಸಲು ಗಾಝಾದಲ್ಲಿ ಶತ್ರುಗಳ ಸೋಲನ್ನು ಸಂಪೂರ್ಣಗೊಳಿಸುವುದು ಅಗತ್ಯವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿರುವುದಾಗಿ ವರದಿಯಾಗಿದೆ.







