ಗಾಝಾಗೆ ಮಾನವೀಯ ನೆರವಿನ ನಿರಾಕರಣೆ | ಇಸ್ರೇಲ್ ನ ಗೌರವ ಕುಸಿಯುತ್ತಿದೆ: ಬ್ರಿಟನ್

PC : aljazeera.com
ಲಂಡನ್, ಸೆ.2: ಗಾಝಾಕ್ಕೆ ಸಾಕಷ್ಟು ನೆರವು ಪೂರೈಸಲು ಇಸ್ರೇಲ್ ಅವಕಾಶ ನಿರಾಕರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ, ಇಸ್ರೇಲ್ ನ ಖ್ಯಾತಿ ಜಗತ್ತಿನಾದ್ಯಂತ ಯುವಕರ ದೃಷ್ಟಿಯಲ್ಲಿ ಕಡಿಮೆಯಾಗುತ್ತಿದೆ ಎಂದಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಮಕ್ಕಳನ್ನು ಗಾಝಾದಿಂದ ಬ್ರಿಟನ್ ನ ಆಸ್ಪತ್ರೆಗೆ ಸ್ಥಳಾಂತರಿಸಿ ವಿಶೇಷ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಗಾಝಾ ನಗರದಲ್ಲಿ ಬರಗಾಲದ ಸ್ಥಿತಿಯಿದೆ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಆದರೆ ಇದು ಪ್ರಾಕೃತಿಕ ದುರಂತವಲ್ಲ, 21ನೇ ಶತಮಾನದಲ್ಲಿ ಮಾನವ ನಿರ್ಮಿತ ಕ್ಷಾಮವಾಗಿದೆ. ಇನ್ನಷ್ಟು ಫೆಲೆಸ್ತೀನೀಯರು ಹಸಿವಿನಿಂದ ಬಳಲುವುದನ್ನು ಮತ್ತು ಸಾಯುವುದನ್ನು ತಡೆಯಲು ಬೃಹತ್ ಮಾನವೀಯ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ಡೇವಿಡ್ ಲ್ಯಾಮಿ ಹೇಳಿದ್ದಾರೆ.
ಈ ಮಧ್ಯೆ, ಗಾಝಾ ಪಟ್ಟಿಯಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸುವ ಇಸ್ರೇಲ್ ನ ನಡೆ ಮತ್ತು ಯುದ್ಧ ಕೊನೆಗೊಳಿಸಬೇಕೆಂಬ ಜಾಗತಿಕ ಆಗ್ರಹದ ಹೊರತಾಗಿಯೂ ಅಂತರಾಷ್ಟ್ರೀಯ ಕಾನೂನನ್ನು ಮುರಿಯಲು ಪಟ್ಟು ಹಿಡಿದಿರುವುದನ್ನು ಖಂಡಿಸುವುದಾಗಿ ಈಜಿಪ್ಟ್ ಹೇಳಿದೆ.
ಈಜಿಪ್ಟ್ ಮತ್ತು ಖತರ್ ಪ್ರಸ್ತಾಪಿಸಿರುವ ಒಪ್ಪಂದಕ್ಕೆ ಪ್ರತಿಕ್ರಿಯಿಸಲು ಇಸ್ರೇಲ್ ನ ವೈಫಲ್ಯವು ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆಗೊಳಿಸಲು ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಆ ದೇಶ ಸಿದ್ಧವಿಲ್ಲ ಎಂಬುದನ್ನು ತೋರಿಸಿದೆ ಎಂದು ಈಜಿಪ್ಟ್ ನ ವಿದೇಶಾಂಗ ಇಲಾಖೆ ಹೇಳಿದೆ.







