ಗಾಝಾ ಯುದ್ಧವು ಕನಿಷ್ಠ 21,000 ಮಕ್ಕಳನ್ನು ವಿಕಲಾಂಗಗೊಳಿಸಿದೆ: ವಿಶ್ವಸಂಸ್ಥೆ ಸಮಿತಿ ವರದಿ

PC : news.un.org
ಜಿನೆವಾ, ಸೆ.4: ಗಾಝಾದಲ್ಲಿ 2023ರ ಅಕ್ಟೋಬರ್ 7ರಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಮುಂದುವರಿದಿರುವ ಯುದ್ಧವು ಕನಿಷ್ಠ 21,000 ಮಕ್ಕಳನ್ನು ವಿಕಲಾಂಗಗೊಳಿಸಿದೆ ಎಂದು ವಿಕಲಾಂಗರ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಸಮಿತಿ ವರದಿ ಮಾಡಿದೆ.
ಸುಮಾರು ಎರಡು ವರ್ಷಗಳಿಂದ ಮುಂದುವರಿದಿರುವ ಯುದ್ಧದಲ್ಲಿ ಕನಿಷ್ಠ 40,500 ಮಕ್ಕಳು ಯುದ್ಧಕ್ಕೆ ಸಂಬಂಧಿಸಿದ ಗಾಯಗಳಿಂದ ನರಳಿದ್ದಾರೆ. ಇದರಲ್ಲಿ 50%ದಷ್ಟು ಮಕ್ಕಳು ವಿಕಲಾಂಗರಾಗಿದ್ದಾರೆ ಎಂದು ಸಮಿತಿಯ ವರದಿ ತಿಳಿಸಿದೆ.
ಫೆಲೆಸ್ತೀನಿಯನ್ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ ವರದಿಯು `ಗಾಝಾದಲ್ಲಿ ಸೇನೆಯ ಆಕ್ರಮಣದ ಸಂದರ್ಭ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ನೀಡುವ ಆದೇಶವು ಶ್ರವಣ ದೋಷ ಅಥವಾ ದೃಷ್ಟಿದೋಷ ಇರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿಕಲಾಂಗ ಜನರನ್ನು ಸುರಕ್ಷಿತವಲ್ಲದ ಮತ್ತು ಅನುಚಿತ ರೀತಿಯಲ್ಲಿ( ಹೊಯಿಗೆಯಲ್ಲಿ , ಕೆಸರಿನಲ್ಲಿ ತೆವಳುತ್ತಾ ಸಾಗಲು ಅಥವಾ ಚಲನೆಗೆ ನೆರವಾಗುವ ಸಾಧನಗಳಿಲ್ಲದೆ) ಸ್ಥಳಾಂತರಗೊಳ್ಳಲು ಬಲವಂತ ಪಡಿಸಲಾಗುತ್ತಿದೆ. ಗಾಝಾ ಪಟ್ಟಿ ತಲುಪಿದ ಮಾನವೀಯ ನೆರವಿನ ಮೇಲೆ ವಿಧಿಸುವ ನಿರ್ಬಂಧಗಳು ವಿಕಲಾಂಗರ ಮೇಲೆ ಅಸಮಾನ ಪರಿಣಾಮಕ್ಕೆ ಕಾರಣವಾಗಿದೆ' ಎಂದು ತಿಳಿಸಿದೆ.
ವಿಕಲಾಂಗ ಜನರು ಮಾನವೀಯ ನೆರವು ಪಡೆಯುವಲ್ಲಿ ತೀವ್ರ ಅಡೆತಡೆಗಳನ್ನು ಎದುರಿಸಿದ್ದಾರೆ. ಆಹಾರ, ಶುದ್ಧ ನೀರು, ನೈರ್ಮಲ್ಯದ ವ್ಯವಸ್ಥೆಯಿಲ್ಲದೆ ಹಲವರು ಬದುಕುಳಿಯಲು ಇತರರನ್ನು ಅವಲಂಬಿಸುವ ಪರಿಸ್ಥಿತಿಯಿದೆ. ವಿಶ್ವಸಂಸ್ಥೆಯ ಏಜೆನ್ಸಿ ಗಾಝಾ ಪ್ರದೇಶದಲ್ಲಿ ಸುಮಾರು 400 ಮಾನವೀಯ ನೆರವು ವಿತರಣಾ ಕೇಂದ್ರಗಳನ್ನು ಹೊಂದಿತ್ತು. ಈಗ ಅದರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಅಮೆರಿಕ-ಇಸ್ರೇಲ್ ಬೆಂಬಲಿತ ಗಾಝಾ ಹ್ಯುಮಾನಿಟೇರಿಯನ್ ಫೌಂಡೇಷನ್(ಜಿಎಚ್ಎಫ್) ಕೇವಲ 4 ಆಹಾರ ವಿತರಣಾ ಕೇಂದ್ರಗಳನ್ನು ಹೊಂದಿದೆ.
ಯುದ್ಧದಿಂದ ನಾಶವಾದ ಮನೆ, ಕಟ್ಟಡಗಳ ಅವಶೇಷಗಳು ಜನರ ಚಲನವಲನಕ್ಕೆ ಅಡ್ಡಿಯಾಗಿದೆ. ಚಲನೆಗೆ ನೆರವಾಗುವ ಸಾಧನಗಳು(ಗಾಲಿ ಕುರ್ಚಿ ಇತ್ಯಾದಿ) ಅವಶೇಷಗಳಡಿ ಸೇರಿಹೋಗಿರುವುದರಿಂದ ವಿಕಲಾಂಗರಿಗೆ ನೆರವು ವಿತರಿಸುವ ಕೇಂದ್ರಗಳನ್ನು ತಲುಪಲು ಸಮಸ್ಯೆಯಾಗುತ್ತಿದೆ. 83%ದಷ್ಟು ವಿಕಲಾಂಗ ಜನತೆ ತಮ್ಮ ಸಹಾಯಕ ಸಾಧನಗಳನ್ನು ಕಳೆದುಕೊಂಡಿದ್ದಾರೆ. ಗಾಲಿ ಕುರ್ಚಿಗಳು, ವಾಕರ್ ಗಳು, ಬೆತ್ತ, ಸ್ಪ್ಲಿಂಟ್ಸ್(ಲೋಹದ ಗಡಸು ಪಟ್ಟಿ), ಕೃತಕ ಅಂಗಗಳನ್ನು ಇಸ್ರೇಲ್ ಅಧಿಕಾರಿಗಳು `ದ್ವಿ-ಬಳಕೆಯ ವಸ್ತುಗಳು'(ನೆರವು ಮತ್ತು ಆಕ್ರಮಣಕ್ಕೆ ಬಳಸುವ) ಎಂದು ಪರಿಗಣಿಸಿರುವುದರಿಂದ ಇವುಗಳನ್ನು ನೆರವು ಸಾಗಣೆಯಲ್ಲಿ ಸೇರಿಸಲಾಗಿಲ್ಲ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಯುದ್ಧದಿಂದ ಪ್ರಭಾವಿತರಾದ ವಿಕಲಾಂಗ ವ್ಯಕ್ತಿಗಳಿಗೆ ಬೃಹತ್ ಮಾನವೀಯ ನೆರವು ತಲುಪಿಸಲು ಕ್ರಮ ಕೈಗೊಳ್ಳಬೇಕು. ಹಿಂಸಾಚಾರದಿಂದ ವಿಕಲಾಂಗರಿಗೆ ಮತ್ತಷ್ಟು ಹಾನಿಯಾಗದಂತೆ, ಅವರು ತಮ್ಮ ಹಕ್ಕುಗಳಿಂದ ವಂಚಿತರಾಗುವುದನ್ನು ತಡೆಯಲು ಸೂಕ್ತ ರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಮಿತಿಯು ಆಗ್ರಹಿಸಿದೆ.
'ಒಂದೂವರೆ ಲಕ್ಷ ಗಾಯಾಳುಗಳು
2023ರ ಅಕ್ಟೋಬರ್ 7ರಿಂದ ಈ ವರ್ಷದ ಆಗಸ್ಟ್ 21ರವರೆಗಿನ ಅವಧಿಯಲ್ಲಿ ಗಾಝಾ ಪ್ರದೇಶದಲ್ಲಿ ಕನಿಷ್ಠ 1,57,114 ಜನರು ಗಾಯಾಳುಗಳಾಗಿದ್ದು ಇವರಲ್ಲಿ 25%ಕ್ಕೂ ಹೆಚ್ಚು ಮಂದಿ ಜೀವಮಾನವಿಡೀ ಅಂಗವೈಕಲ್ಯದ ಅಪಾಯದಲ್ಲಿದ್ದಾರೆ. ವಿಕಲಾಂಗ ಮಕ್ಕಳನ್ನು ದಾಳಿಯಿಂದ ರಕ್ಷಿಸಲು ಇಸ್ರೇಲ್ ನಿರ್ದಿಷ್ಟ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸ್ಥಳಾಂತರದ ಸಂದರ್ಭ ವಿಕಲಾಂಗ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವ ಶಿಷ್ಟಾಚಾರವನ್ನು ಪಾಲಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.







