ಗಾಝಾದಲ್ಲಿ ಇಸ್ರೇಲ್ ನ ಯುದ್ಧಾಪರಾಧಕ್ಕೆ ಪುರಾವೆ ಹೆಚ್ಚುತ್ತಿದೆ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್

ವೋಕರ್ ಟರ್ಕ್ | PC : news.un.org
ಜಿನೆವಾ, ಸೆ.8: ಗಾಝಾದಲ್ಲಿ ಇಸ್ರೇಲ್ ನಿಂದ ವ್ಯಾಪಕ ಉಲ್ಲಂಘನೆ ನಡೆಯುತ್ತಿದ್ದು ಹೆಚ್ಚುತ್ತಿರುವ ಪುರಾವೆಗಳು ಅದನ್ನು ಅಂತರಾಷ್ಟ್ರೀಯ ನ್ಯಾಯಾಲಯದ ಎದುರು ಹೊಣೆಗಾರನನ್ನಾಗಿ ಮಾಡಬಹುದು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಎಚ್ಚರಿಸಿದ್ದಾರೆ.
ಜಿನೆವಾದಲ್ಲಿ ಆರಂಭಗೊಂಡ ವಿಶ್ವಸಂಸ್ಥೆ ಮಾನವ ಹಕ್ಕುಗಳ 60ನೇ ಅಧಿವೇಶನದಲ್ಲಿ ಮಾತನಾಡಿದ ಅವರು ` ಗಾಝಾವು ಈಗಾಗಲೇ ಸ್ಮಶಾನವಾಗಿದೆ. ಇಸ್ರೇಲ್ ನ ಹಿರಿಯ ಅಧಿಕಾರಿಗಳಿಂದ ಫೆಲೆಸ್ತೀನೀಯರ ವಿರುದ್ಧ ಬಹಿರಂಗವಾಗಿ ಜನಾಂಗೀಯ ಅವಹೇಳನಕಾರಿ ಪದ ಬಳಕೆ, ಫೆಲೆಸ್ತೀನೀಯರನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುತ್ತಿರುವ ವರದಿಯಿಂದ ಕಳವಳಗೊಂಡಿರುವುದಾಗಿ' ಹೇಳಿದರು.
`ಇಸ್ರೇಲ್ ನಿಂದ ಫೆಲೆಸ್ತೀನೀಯರ ಸಾಮೂಹಿಕ ಹತ್ಯೆ, ಮಾನವೀಯ ನೆರವಿಗೆ ಅಡ್ಡಿ, ಯುದ್ಧಾಪರಾಧಗಳು ಜಗತ್ತಿನ ಆತ್ಮಸಾಕ್ಷಿಗೆ ಆಘಾತಕಾರಿಯಾಗಿದೆ. ಯಾವುದೇ ಹೊಣೆಗಾರಿಕೆಯಿಲ್ಲದೆ ಯುದ್ಧದ ನಿಯಮಗಳನ್ನು ನಿರ್ದಾಕ್ಷಿಣ್ಯವಾಗಿ ಉಲ್ಲಂಘಿಸಲಾಗುತ್ತಿದೆ. ಗಾಝಾದಲ್ಲಿನ ಪರಿಸ್ಥಿತಿಯು ಅಂತರಾಷ್ಟ್ರೀಯ ಕಾನೂನಿನ ವಿಶಾಲ ಸವೆತವನ್ನು ಪ್ರತಿಬಿಂಬಿಸುತ್ತದೆ. ಹಿಂಸಾಚಾರದ ವೈಭವೀಕರಣ ಮತ್ತು ಮಾನವ ಹಕ್ಕುಗಳ ನಿರಾಕರಣೆಯಂತಹ ಕೃತ್ಯಗಳು ಗಾಝಾದಲ್ಲಿ ಹೆಚ್ಚುತ್ತಿವೆ. ಗಾಝಾದಲ್ಲಿನ ರಕ್ತಪಾತವನ್ನು ಕೊನೆಗೊಳಿಸಲು ನಿರ್ಣಾಯಕ ಅಂತರಾಷ್ಟ್ರೀಯ ಕ್ರಮಗಳು ಅಗತ್ಯವಿದೆ ಎಂದು ಆಗ್ರಹಿಸಿದ ಟರ್ಕ್, ದೌರ್ಜನ್ಯ ಪ್ರಕರಣಗಳ ಪುರಾವೆ ಹೆಚ್ಚುತ್ತಿರುವುದು ತುರ್ತು ಹೊಣೆಗಾರಿಕೆಯ ಅಗತ್ಯವನ್ನು ಒತ್ತಿ ಹೇಳಿದೆ ಎಂದಿದ್ದಾರೆ.
ಗಾಝಾವು ಸ್ಮಶಾನವಾಗಿದೆ. ಈ ಪ್ರದೇಶವು ಶಾಂತಿಗಾಗಿ ಮೊರೆಯಿಡುತ್ತಿದೆ. ಮತ್ತಷ್ಟು ಮಿಲಿಟರೀಕರಣ, ಆಕ್ರಮಣ, ಸ್ವಾಧೀನ ಪ್ರಕ್ರಿಯೆಯು ಮತ್ತಷ್ಟು ಹಿಂಸಾಚಾರ, ಪ್ರತೀಕಾರ ಕ್ರಮ ಮತ್ತು ಭಯೋತ್ಪಾದನೆಯನ್ನು ಮಾತ್ರ ಪೋಷಿಸುತ್ತದೆ. ಅಂತರಾಷ್ಟ್ರೀಯ ನ್ಯಾಯಾಲಯದ ಆದೇಶದಂತೆ ನರಮೇಧದದ ಕೃತ್ಯಗಳನ್ನು ತಡೆಯಲು, ಜನಾಂಗೀಯ ಹತ್ಯೆಗೆ ಶಿಕ್ಷೆ ವಿಧಿಸಲು ಮತ್ತು ಸಾಕಷ್ಟು ನೆರವು ಗಾಝಾದಲ್ಲಿನ ಫೆಲೆಸ್ತೀನೀಯರನ್ನು ತಲುಪುವುದನ್ನು ಖಾತರಿ ಪಡಿಸಲು ಕಾನೂನುಬದ್ಧ ಬಾಧ್ಯತೆಯನ್ನು ಇಸ್ರೇಲ್ ಹೊಂದಿದೆ ಎಂದವರು ಹೇಳಿದ್ದಾರೆ.







