ಗಾಝಾ: 3 ಒತ್ತೆಯಾಳುಗಳ ಮೃತದೇಹ ರೆಡ್ ಕ್ರಾಸ್ ಗೆ ಹಸ್ತಾಂತರ

Photo Credit : aljazeera.com
ಗಾಝಾ, ನ.3: ಗಾಝಾದಲ್ಲಿ ಮೂರು ಒತ್ತೆಯಾಳುಗಳ ಮೃತದೇಹದ ಅವಶೇಷಗಳನ್ನು ರೆಡ್ ಕ್ರಾಸ್ ಗೆ ಒಪ್ಪಿಸಲಾಗಿದ್ದು ರೆಡ್ ಕ್ರಾಸ್ ಅವುಗಳನ್ನು ಇಸ್ರೇಲ್ ಮಿಲಿಟರಿಗೆ ಹಸ್ತಾಂತರಿಸಲಿದೆ. ದಕ್ಷಿಣ ಗಾಝಾದ ಸುರಂಗವೊಂದರಲ್ಲಿ ಈ ಅವಶೇಷಗಳು ಪತ್ತೆಯಾಗಿದ್ದವು ಎಂದು ಹಮಾಸ್ ಸೋಮವಾರ ಹೇಳಿದೆ.
ಅಕ್ಟೋಬರ್ 10ರಂದು ಗಾಝಾದಲ್ಲಿ ಕದನ ವಿರಾಮ ಜಾರಿಗೆ ಬಂದಂದಿನಿಂದ ಹಮಾಸ್ 17 ಒತ್ತೆಯಾಳುಗಳ ಮೃತದೇಹವನ್ನು ಹಸ್ತಾಂತರಿಸಿದ್ದು ಇನ್ನೂ 11 ಮೃತದೇಹಗಳನ್ನು ಹಸ್ತಾಂತರಿಸಬೇಕಿದೆ. ಯುದ್ಧದಿಂದ ಜರ್ಝರಿತಗೊಂಡಿರುವ, ವ್ಯಾಪಕ ವಿನಾಶ ಸಂಭವಿಸಿರುವ ಗಾಝಾದಲ್ಲಿ ಮೃತದೇಹಗಳ ಅವಶೇಷಗಳನ್ನು ಶೋಧಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ಹಮಾಸ್ ಮೂಲಗಳು ಹೇಳಿವೆ.
ರವಿವಾರ ಹಮಾಸ್ ಹಸ್ತಾಂತರಿಸಿದ ಮೃತದೇಹಗಳು 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ್ದ ದಾಳಿಯಲ್ಲಿ ಸಾವನ್ನಪ್ಪಿದ್ದ ಯೋಧರದ್ದಾಗಿದೆ. ದಕ್ಷಿಣ ಇಸ್ರೇಲ್ ನಲ್ಲಿ ಮೃತಪಟ್ಟಿದ್ದ ಈ ಯೋಧರ ಮೃತದೇಹಗಳನ್ನು ಹಮಾಸ್ ಹೋರಾಟಗಾರರು ಗಾಝಾಕ್ಕೆ ಎಳೆದೊಯ್ದಿದ್ದರು ಎಂದು ಇಸ್ರೇಲ್ ಮಿಲಿಟರಿ ಸೋಮವಾರ ದೃಢಪಡಿಸಿದೆ.





