ಗಾಝಾ | ಅಂತರಾಷ್ಟ್ರೀಯ ಪಡೆಗೆ ವಿಶ್ವಸಂಸ್ಥೆಯ ಆದೇಶ ಪಡೆಯಲು ಅಮೆರಿಕಾ ಸಿದ್ಧತೆ: ಕರಡು ನಿರ್ಣಯ ರಚನೆ

Photo Credit : hrw.org
ವಿಶ್ವಸಂಸ್ಥೆ, ನ.5: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಯೋಜನೆಯ ಭಾಗವಾಗಿ ಗಾಝಾದಲ್ಲಿ ನಿಯೋಜಿಸಲಾಗುವ ಅಂತರಾಷ್ಟ್ರೀಯ ಭದ್ರತಾ ಪಡೆ(ಐಎಸ್ಎಫ್)ಗೆ 2 ವರ್ಷದವರೆಗೆ ಕಾರ್ಯನಿರ್ವಹಿಸುವ ಆದೇಶವನ್ನು ವಿಶ್ವಸಂಸ್ಥೆಯಿಂದ ಪಡೆಯಲು ಅಮೆರಿಕ ಯೋಜಿಸುತ್ತಿರುವುದಾಗಿ ವರದಿಯಾಗಿದೆ.
ಪ್ರಸ್ತಾವನೆಯನ್ನು ವಿವರಿಸುವ ಕರಡು ನಿರ್ಣಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಹಲವು ಸದಸ್ಯರಿಗೆ ಅಮೆರಿಕಾ ರವಾನಿಸಿದೆ. ಅಂತರಾಷ್ಟ್ರೀಯ ಪಡೆಗೆ ಸಂಬಂಧಿಸಿದ ಕಾರ್ಯವು ನಾಗರಿಕರನ್ನು ರಕ್ಷಿಸುವುದು ಮತ್ತು ಹೊಸ ಫೆಲೆಸ್ತೀನಿಯನ್ ಪೊಲೀಸ್ ಪಡೆಗೆ ತರಬೇತಿ ನೀಡುವುದನ್ನು ಒಳಗೊಂಡಿರುತ್ತದೆ ಎಂದು ಕರಡು ನಿರ್ಣಯದಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ `ಆಕ್ಸಿಯೋಸ್' ಸುದ್ದಿಸಂಸ್ಥೆ ವರದಿ ಮಾಡಿದೆ.
ಇದರ ಜೊತೆಗೆ, ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವುದೂ(ಹಮಾಸ್ ಅಥವಾ ಆ ಗುಂಪಿನೊಳಗಿನ ಅಂಶಗಳು ಸ್ವಯಂ ಪ್ರೇರಣೆಯಿಂದ ಹಾಗೆ ಮಾಡದಿದ್ದಲ್ಲಿ) ಐಎಸ್ಎಫ್ ನ ಕಾರ್ಯವಾಗಿದೆ. ಐಎಸ್ಎಫ್ ವಿಶಾಲ ಪಾತ್ರವನ್ನು ಹೊಂದಲು ಮತ್ತು ಗಾಝಾ ಒಪ್ಪಂದಕ್ಕೆ ಬೆಂಬಲವಾಗಿ ಅಗತ್ಯವಿರುವ ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸಲು ಅವಕಾಶವಿದೆ ಎಂದು ಕರಡು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಅಂತರಾಷ್ಟ್ರೀಯ ಪಡೆಯು ಹಲವಾರು ಭಾಗವಹಿಸುವ ದೇಶಗಳ ತುಕಡಿಯನ್ನು ಒಳಗೊಂಡಿರುತ್ತದೆ ಮತ್ತು ಗಾಝಾ ಶಾಂತಿ ಮಂಡಳಿಯೊಂದಿಗೆ ಸಮಾಲೋಚಿಸಿದ ಬಳಿಕ ಸ್ಥಾಪಿಸಲಾಗುತ್ತದೆ. ವಿಶ್ವಸಂಸ್ಥೆ, ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೇರಿದಂತೆ ಗಾಝಾಕ್ಕೆ ನೆರವು ನೀಡುವ ಎಲ್ಲಾ ಸಂಸ್ಥೆಗಳು ಶಾಂತಿ ಮಂಡಳಿಯೊಂದಿಗೆ ಕೆಲಸ ಮಾಡುತ್ತದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
► ಗಾಝಾ ಶಾಂತಿ ಮಂಡಳಿ
ತಮ್ಮ 20 ಅಂಶಗಳ ಗಾಝಾ ಶಾಂತಿ ಯೋಜನೆಯಲ್ಲಿ ಶಾಂತಿ ಮಂಡಳಿಯ ಸ್ಥಾಪನೆಯನ್ನು ಟ್ರಂಪ್ ಪ್ರಸ್ತಾಪಿಸಿದ್ದರು. ಟ್ರಂಪ್ ಮಂಡಳಿಯ ಅಧ್ಯಕ್ಷರಾಗಿದ್ದರೆ ಬ್ರಿಟನ್ ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಸೇರಿದಂತೆ ಹಲವು ಸದಸ್ಯರಿರುತ್ತಾರೆ. ವಿಶ್ವಸಂಸ್ಥೆ, ಅರಬ್ ಮತ್ತು ಮುಸ್ಲಿಂ ದೇಶಗಳ ಪ್ರತಿನಿಧಿಗಳನ್ನು ಮಂಡಳಿ ಹೊಂದಿರುತ್ತದೆ ಮತ್ತು ಇದು ಕನಿಷ್ಠ 2027ರ ಅಂತ್ಯದವರೆಗೆ ಅಸ್ಥಿತ್ವದಲ್ಲಿರುತ್ತದೆ. ಈ ಮಂಡಳಿಯು (ಗಾಝಾದ ನಾಗರಿಕ ಸೇವೆ ಮತ್ತು ಆಡಳಿತದ ದೈನಂದಿನ ಕಾರ್ಯಾಚರಣೆಯ ಹೊಣೆ ಹೊತ್ತ) ಫೆಲೆಸ್ತೀನಿಯನ್ ತಾಂತ್ರಿಕ ಸಮಿತಿಯ ಮೇಲ್ವಿಚಾರಣೆಯ ಜೊತೆಗೆ ಅದನ್ನು ಬೆಂಬಲಿಸುವ ಕೆಲಸ ಮಾಡುತ್ತದೆ.







